ಹಿಂದೂಯೇತರ ಕಾಲಮ್ ನಲ್ಲಿ ಹೆಸರು: ರಾಹುಲ್ ಗಾಂಧಿ 'ಜನಿವಾರ ಧಾರಿ' ಹಿಂದೂ ಎಂದ ಕಾಂಗ್ರೆಸ್

Published On :
ನವದೆಹಲಿ: ಸೋಮನಾಥ್ ದೇವಾಲಯದ ಅತಿಥಿಗಳ ಅಭಿಪ್ರಾಯ ಪುಸ್ತಕದಲ್ಲಿ ಹಿಂದೂಯೇತರ ಕಾಲಮ್‌ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರು ನಮೂದಿಸಿರುವ ಚಿತ್ರ ನಕಲು ಎಂದು ಹೇಳುವ ಮೂಲಕ ಕಾಂಗ್ರೆಸ್ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಎಸ್ ಸುರ್ಜೆವಾಲಾ ಅವರು, ರಾಹುಲ್ ಗಾಂಧಿ ಅವರು ಬುಧವಾರ ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ಅತಿಥಿಗಳ ಅಭಿಪ್ರಾಯ ಪುಸ್ತಕದಲ್ಲಿ ಅವರು ಮಾಡಿರುವ ಸಹಿಗೂ ಮತ್ತು ಹಿಂದೂಯೇತರ ಕಾಲಮ್ ನಲ್ಲಿರುವ ಸಹಿಗೂ ತುಂಬಾ ವ್ಯತ್ಯಾಸ ಇದೆ. ಹೀಗಾಗಿ ಅದು ನಕಲಿ ಎಂದು ಹೇಳಿದ್ದಾರೆ.
ಈ ವೇಳೆ ರಾಹುಲ್ ಗಾಂಧಿ ಹೆಸರು, ವಿಳಾಸ ಹಾಗೂ ಸಹಿ ಇರುವ ಮತ್ತೊಂದು ಅತಿಥಿಗಳ ಪುಸ್ತಕವನ್ನು ಪ್ರದರ್ಶಿಸಿದ ಕಾಂಗ್ರೆಸ್ ನಾಯಕ ದೀಪೇಂದ್ರ ಹೂಡಾ ಅವರು, ಇದು ರಾಹುಲ್ ಗಾಂಧಿ ಅವರ ಮೂಲ ಸಹಿ. ಆದರೆ ಮತ್ತೊಂದು ಸಹಿಯಲ್ಲಿ ರಾಹುಲ್ ಗಾಂಧಿಜಿ ಎಂದು ಬರೆಯಲಾಗಿದೆ. ಅವರು ಏಕೆ ತಮ್ಮನ್ನು ತಾವು ಜಿ ಎಂದು ಬರೆಯುತ್ತಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಯಾರು ನಕಲಿ ಸಹಿ ಮಾಡಿದ್ದರೆ ಎಂಬುದು ಗೊತ್ತಿಲ್ಲ. ಆದರೆ ಬಿಜೆಪಿ ವಿಷಯಾಂತರ ಮಾಡಲು ಈ ರೀತಿ ವಿವಾದಗಳನ್ನು ಸೃಷ್ಟಿಸಿದೆ ಎಂದು ಹೂಡಾ ಅವರು ಆರೋಪಿಸಿದ್ದಾರೆ.
ಇನ್ನು ಸೂರ್ಜೆವಾಲಾ ಅವರು, ರಾಹುಲ್ ಗಾಂಧಿ ಕೇವಲ ಹಿಂದೂ ಮಾತ್ರವಲ್ಲಿ. ಅವರು ಒಬ್ಬ ಜನಿವಾರ ಧಾರಿ ಹಿಂದೂ. ಬಿಜೆಪಿ ಈ ರೀತಿ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ನ ಸೌರಾಷ್ಟ್ರದಲ್ಲಿರುವ ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ದೇವಾಲಯದಲ್ಲಿ ಪುಸ್ತಕದಲ್ಲಿ ಹಿಂದೂಯೇತರ ಎಂಬ ಕಾಲಮ್‌ನಲ್ಲಿ ತಮ್ಮ ಹೆಸರು ನಮೂದಿಸಿ, ಸಹಿ ಮಾಡಿದ್ದ ಚಿತ್ರವೊಂದು ವಿವಾದ ಸೃಷ್ಟಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


