ನವದೆಹಲಿ: "ನಾನೊಬ್ಬ ಭಿಕ್ಷುಕ, ನನ್ನಲ್ಲಿ ಯಾವ ಬೇಡಿಕೆಗಳೂ ಇಲ್ಲ", ಸಾಮಾಲಿಕ ಕಾರ್ಯಕರ್ತ ಅಣ್ಣಾ ಹಜಾರೆ ಲೋಕಪಾಲ್ ಗೆ ಸಂಬಂಧಿಸಿದ ಪ್ರಶ್ನೆಗೆ ಹೀಗೆ ಪ್ರತಿಕ್ರಯಿಸಿದರು.
ಮಹಾತ್ಮಾ ಗಾಂಧಿ 148ನೇ ಜನ್ಮದಿನದ ಪ್ರಯುಕ್ತ ದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲು ಬಂದಿದ್ದ ಅಣ್ಣಾ ಹಜಾರೆಯವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ "ರಾಜ್ ಘಾಟ್ ನಲ್ಲಿ ಮಹಾತ್ಮಾ ಗಾಂಧಿಗೆ ನನ್ನ ಗೌರವಗಳನ್ನು ಸಲ್ಲಿಸಲಿಕ್ಕಾಗಿ ಮಾತ್ರ ನಾನಿಲ್ಲಿಗೆ ಬಂದಿದ್ದೇನೆ" ಎಂದರು.
ಸೆ.1 ರಂದು ಸುಪ್ರೀಂ ಕೋರ್ಟ್, ಲೋಕಾಯುಕ್ತ ಮಸೂದೆ, ಲೋಕಪಾಲ್ ಮಸೂದೆ, ನಾಗರಿಕ ಚಾರ್ಟರ್ ಅನ್ನು ಅನುಷ್ಠಾನಕ್ಕೆ ತರುವ ಸಂಬಂಧ ಶೀಘ್ರದಲ್ಲೇ ವಿಚಾರಣೆ ಪ್ರಾರಂಭಿಸುವುದಾಗಿ ಹೇಳಿತ್ತು..
ಬಿಜೆಪಿ ನೇತೃತ್ವದ ಸರ್ಕಾರ ಲೋಕಪಾಲ್ ವಿಧೇಯಕವನ್ನು ಜಾರಿಗೊಳಿಸುವ ಕುರಿತು ಸರಿಯಾದ ನಿರ್ಧಾರಕ್ಕೆ ಬರಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದ ಹಜಾರೆ ಇದು ಸರ್ಕಾರದ 'ಅಹಂಕಾರ'ಕ್ಕೆ ಹಿಡಿದ ಕನ್ನಡಿ ಎಂದಿದ್ದರು, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕವೂ ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗದಿರುವುದು ಅಣ್ಣಾ ಹಜಾರೆ ಅವರಿಗೆ ತೀವ್ರ ಅಸಮಾಧಾನ ಉಂಟು ಮಾಡಿತ್ತು.