ನೋಟು ನಿಷೇಧ 'ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ': ಅರುಣ್ ಶೌರಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಸರ್ಕಾರಿ ಪ್ರಾಯೋಜಿತ ಅಕ್ರಮ ಹಣ ವರ್ಗಾವಣೆ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ.
ನೋಟು ನಿಷೇಧ ಸಂಬಂಧ ಮಂಗಳವಾರ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅರುಣ್ ಶೌರಿ ಅವರು ನೋಟು ರದ್ದತಿ ಪ್ರಕ್ರಿಯೆಯು ಕೇಂದ್ರ ಸರ್ಕಾರವೇ ವ್ಯವಸ್ಥಿತವಾಗಿ ರೂಪಿಸಿ ಅನುಷ್ಠಾನಗೊಳಿಸಿದ 'ಎಲ್ಲ ಕಪ್ಪು ಹಣವನ್ನು ಸಕ್ರಮಗೊಳಿಸಿದ ಅತಿದೊಡ್ಡ ಸರ್ಕಾರೀ ಯೋಜನೆಯಾಗಿದೆ' ಎಂದು ಹೇಳಿದ್ದಾರೆ. ಕಪ್ಪುಹಣ ಹೊಂದಿರುವ ಪ್ರತಿಯೊಬ್ಬರಿಗೂ ಹಣವನ್ನು ಸಕ್ರಮಗೊಳಿಸಲು ದಾರಿ ಮಾಡಿಕೊಟ್ಟ ಈ ಪ್ರಕ್ರಿಯೆ ಒಂದು ‘ಮೂರ್ಖ ನಡೆ’ಯಾಗಿತ್ತು ಎಂದು  ಶೌರಿ ಹೇಳಿದ್ದಾರೆ.

ರದ್ದಾದ ಹಣದ ಪೈಕಿ ಶೇ.99ರಷ್ಟು ಹಣ ವಾಪಸ್ ಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಅದರಂತೆ ಕೇಂದ್ರ ಸರ್ಕಾರದ ನಡೆಯಿಂದ ಬಹುತೇಕ ಕಪ್ಪು ಹಣ ಅಥವಾ ತೆರಿಗೆ ತಪ್ಪಿಸಿದ ಹಣವನ್ನು  ಪತ್ತೆಹಚ್ಚಲಾಗಿಲ್ಲ. ಅಂತೆಯೇ ಸರ್ಕಾರದ ತಪ್ಪುಹೆಜ್ಜೆಗಳ ಸಾಲಲ್ಲಿ ಜಿಎಸ್‌ಟಿ ಕೂಡ ಪ್ರಮುಖವಾದದ್ದು ಎಂದು ಹೇಳಿರುವ ಶೌರಿ, ಜಿಎಸ್ ಟಿ ಪ್ರಮುಖ ಆರ್ಥಿಕ ಸುಧಾರಣಾ ಕ್ರಮವಾಗಿದ್ದರೂ ಸರ್ಕಾರ ಇದನ್ನು ಅನುಷ್ಠಾನಗೊಳಿಸಿರುವ  ರೀತಿ ಸರಿಯಾಗಿಲ್ಲ. ಈ ನಿಯಮಕ್ಕೆ ಮೂರು ತಿಂಗಳಲ್ಲಿ 7 ಬಾರಿ ತಿದ್ದುಪಡಿ ಮಾಡಲಾಗಿದೆ ಎಂದು ಶೌರಿ ಹೇಳಿದರು.

ಜಿಎಸ್‌ಟಿ ಜಾರಿಗೊಳಿಸಿದ ಸಂದರ್ಭವನ್ನೂ ಟೀಕಿಸಿದ ಶೌರಿ, ಭಾರತದ ಸ್ವಾತಂತ್ರ ಘೋಷಣೆಯ ಸಂದರ್ಭಕ್ಕೆ ಜಿಎಸ್‌ಟಿ ಅನುಷ್ಠಾನದ ಸಂದರ್ಭವನ್ನು ಹೋಲಿಕೆ ಮಾಡಿರುವುದನ್ನು ಅವರು ಲೇವಡಿ ಮಾಡಿದರು. ಕೇಂದ್ರ  ಸರ್ಕಾರದ ಪ್ರಮುಖ ಆರ್ಥಿಕ ಕಾರ್ಯನೀತಿಗಳನ್ನು ‘2.5 ಮಂದಿ ಒಳಗೊಂಡಿರುವ ರಹಸ್ಯ ಚೇಂಬರ್‌ನಲ್ಲಿ' ಕೈಗೊಳ್ಳಲಾಗುತ್ತಿದೆ. ಈ ಎರಡೂವರೆ ಮಂದಿ ಎಂದರೆ ಪ್ರಧಾನಿ ಮೋದಿ, ಅಮಿತ್ ಶಾ, ಹಾಗೂ ಓರ್ವ ಸರ್ಕಾರಿ ವಕೀಲ  ಎಂದು ಶೌರಿ ಲೇವಡಿ ಮಾಡಿದರು.

ಇದೇ ವೇಳೆ  ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಶೌರಿ, ಪ್ರಸ್ತುತ ಕೇಂದ್ರ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಬಿಜೆಪಿಯಲ್ಲಿನ ಪ್ರತಿಯೊಬ್ಬರಿಗೂ  ಕಳವಳವಿದೆ. ಆದರೆ ಈ ಬಗ್ಗೆ ಯಾರಿಗೂ ಸೊಲ್ಲೆತ್ತಲು ಧೈರ್ಯವಿಲ್ಲ ಎಂಬ ಸಿನ್ಹಾ ಹೇಳಿಕೆ ಸರಿಯಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com