ಗಾಂಧಿನಗರ: ದೇಶದಲ್ಲಿ ಡಿಜಿಟಲ್ ಸಾಕ್ಷರತೆಗೆ ಹೆಚ್ಚು ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನ ಕ್ರಾಂತಿಯ ಮೂಲಕ ನವ ಭಾರತ ನಿರ್ಮಾಣ ಮಾಡುವುದಾಗಿ ಶನಿವಾರ ಗುಜರಾತ್ ನಲ್ಲಿ ಹೇಳಿದ್ದಾರೆ.
ಐಐಟಿ ಗಾಂಧಿನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ಡಿಜಿಟಲ್ ತಂತ್ರಜ್ಞಾನವನ್ನು ದೇಶದ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಭಾರತದ ಎಲ್ಲಾ ಭಾಗದಲ್ಲಿ ಸಮಾಜದ ಎಲ್ಲಾ ಸ್ಥರದ, ಎಲ್ಲಾ ವಯೋಮಾನದವರಿಗೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ಈಗಾಗಲೇ ನಡೆದಿದೆ. ಡಿಜಿಟಲ್ ಇಂಡಿಯಾದಲ್ಲಿ ಹೆಚ್ಚು ಪಾರದರ್ಶಕತೆಯನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶಿಕ್ಷಣ ಪರೀಕ್ಷೆಗಳಿಗೆ ಸೀಮಿತವಾಗಿರಬಾರದು. ಹೊಸ ಹೊಸ ಸಂಶೋಧನೆಗಳಿಗೆ ಹೆಚ್ಚು ಮಹತ್ವ ನೀಡಿ. ಐಐಟಿ ಗಾಂಧಿನಗರ ಕ್ಯಾಂಪಸ್ ವಿಶ್ವದ ಅತ್ಯುತ್ತಮ ಕ್ಯಾಂಪಸ್ ಗಳಲ್ಲಿ ಒಂದಾಗಬೇಕು ಎಂದು ಹೇಳಿದ್ದಾರೆ.
ಇದಕ್ಕು ಮುನ್ನ ದ್ವಾರಕಾದಲ್ಲಿ ಓಖ ಮತ್ತು ಬೆಟ್ ದ್ವಾರಕಾದ ನಡುವೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿ ಮಾತನಾಡಿದ್ದ ಮೋದಿ, ಜಿಎಸ್ ಟಿ ದರ ಇಳಿಸಲು ಜಿಎಸ್‌ಟಿ ಕೌನ್ಸಿಲ್ ಸಭೆ ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ದೀಪಾವಳಿ ಸಂಭ್ರಮ ಹಬ್ಬಕ್ಕೆ ಮುಂಚಿತವಾಗಿಯೇ ಬಂದಿದೆ ಎಂದಿದ್ದರು.