ಶ್ರೀನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೋಪಿಯಾನ್ ನಲ್ಲಿ ಸೇನಾಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಈ ಮೂವರ ಪೈಕಿ ಇಬ್ಬರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದು, ಓರ್ವ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನಾಗಿದ್ದಾನೆ ಎಂದು ಭಾರತೀಯ ಸೇನಾಪಡೆಯ ಕಮಾಂಡಿಂಗ್ ಆಫೀಸರ್ ಹೇಳಿದ್ದಾರೆ. ಇನ್ನು ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಕಾಶ್ಮೀರ ಪ್ರಾಂತ್ಯದ ಪ್ರಮುಖ ನೇಮಕಾತಿದಾರ ಜಾಹೀದ್, ಉಗ್ರ ಇರ್ಫಾನ್ ಹಾಗೂ ಎಲ್ ಇಟಿ ಉಗ್ರ ಆಸಿಫ್ ನನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ಸೇನೆ ಸ್ಥಳವನ್ನು ಸುತ್ತುವರೆದು ಉಗ್ರರ ಬಂಧನಕ್ಕೆ ಯತ್ನಿಸಿತ್ತು. ಆದರೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿ ನಡೆಸಲಾಯಿತು. ಈ ವೇಳೆ ಮೂರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ಬಾರಾಮುಲ್ಲಾದ ನಡೆದ ಎನ್ ಕೌಂಟರ್ ನಲ್ಲಿ ಜೈಶ್ ಇ ಮೊಹಮದ್ ಉಗ್ರ ಕಮಾಂಡರ್ ಉಮರ್ ಖಲೀದ್ ಸಾವನ್ನಪ್ಪಿದ್ದಾನೆ ಎಂದು ಸೇನೆ ಹೇಳಿದೆ.