ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವೇಳೆ ತಮ್ಮಿಂದ ಗಂಗಾ ನದಿ ಪುನಶ್ಚೇತನ ಖಾತೆ ಕಿತ್ತುಕೊಂಡ ಮೋದಿ ಸರ್ಕಾರದ ಕ್ರಮದ ಬಗ್ಗೆ ಉಮಾ ಭಾರತಿಯವರು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಉಮಾ ಭಾರತಿಯವರು ಗಂಗೆಯನ್ನು ನನ್ನಿಂಗ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ನಮಾಮಿ ಗಂಗೆ ಯೋಜನೆಯಲ್ಲಿ ಬಹುತೇಕ ಯೋಜನೆಗಳನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಈ ಯೋಜನೆ ಜಾರಿಯ ಪ್ರತಿ ಹಂತದಲ್ಲೂ ನಾನು ಗಡ್ಕರಿ ಸಲಹೆ ಪಡೆದುಕೊಂಡಿದ್ದೇನೆ. ಹೀಗಿದ್ದರೂ ನಾನು ವಿಫಲಳಾಗಿದ್ದೇನೆ ಎಂದಾದಲ್ಲಿ ಅದೇ ಖಾತೆಯನ್ನು ಗಡ್ಕರಿ ಹೇಗೆ ಪಡೆದರು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗಂಗೆಯನ್ನು ನನ್ನಿಂದ ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಾಗದು. ಗಂಗೆ ಈಗಲೂ ನನ್ನ ಬಳಿ ಇದ್ದಾಳೆ. ಜೊತೆಗೆ ಅಕ್ಟೋಬರ್ ನಲ್ಲಿ ಪಶ್ಚಿಮ ಬಂಗಾಳದ ಗಂಗಾಸಾಗರ್ ನಿಂದ ಪಾದಯಾತ್ರೆ ಕೈಗೊಳ್ಳುವುದಾಗಿಯೂ ಇದೇ ವೇಳೆ ಘೋಷಣೆ ಮಾಡಿದ್ದಾರೆ. ಆದರೆ, ಇದು ಪ್ರತಿಭಟನೆಯ ಹಾದಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ವೈಫಲ್ಯದ ಕಾರಣಕ್ಕಾಗಿ ನನ್ನಿಂದ ಹುದ್ದೆ ಕಿತ್ತುಕೊಂಡಿಲ್ಲ. ಮೋದಿ ಆಡಳಿತದ ವಿಷಯವಾಗಿ ಎಂದೂ ನನ್ನನ್ನು ಟೀಕಿಸಿಲ್ಲ. 3 ವರ್ಷಗಳಲ್ಲಿ ಒಂದೆರೆಡು ಬಾರಿ ಮಾತ್ರ ನನ್ನ ಛೇಡಿಸಿದ್ದಾರೆ. ಅದೂ ನಾನು ತೀರಾ ದಪ್ಪವಾಗಿದ್ದೇನೆಂಬ ಕಾರಣಕ್ಕೆ ಎಂದಿದ್ದಾರೆ.