ಪಣಜಿ: ಉಗ್ರರ ಶಂಕಿತ ದಾಳಿ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಗೋವಾ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೂಲಗಳ ಪ್ರಕಾರ ಗೋವಾದಲ್ಲಿ ಸಮುದ್ರ ಮಾರ್ಗದ ಮೂಲಕ ಉಗ್ರರು ಆಗಮಿಸಿ ದಾಳಿ ಮಾಡುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ವೀಡಿದ್ದು. ಈ ಸಂಬಂಧ ಗೋವಾ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಉಗ್ರರು ಗೋವಾ ಕರಾವಳಿ ತೀರಕ್ಕೆ ಮೀನುಗಾರಿಕೆ ಮಾಡುವ ಮತ್ತು ಪ್ರವಾಸಿಗರ ಸೋಗಿನಲ್ಲಿ ಆಗಮಿಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಗೋವಾ ಕರಾವಳಿ ತೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಗೋವಾ ಮಾತ್ರವಲ್ಲ ಮುಂಬೈ ಮೂಲಕವೂ ದಾಳಿ ಸಾಧ್ಯತೆ
ಇದೇ ವೇಳೆ ಗೋವಾ ಮಾತ್ರವಲ್ಲದೇ ಉಗ್ರರು ಮುಂಬೈ ಸಮುದ್ರ ಮಾರ್ಗದ ಮೂಲಕವೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ಗೋವಾ ಕರಾವಳಿ ತೀರದಲ್ಲಿ ಅನುಮಾನಸ್ಪದವಾಗಿ ಮೀನು ಹಿಡಿಯುತ್ತಿದ್ದ ಪ್ರವಾಸಿಗನೋರ್ವನನ್ನು ಅಧಿಕಾರಿಗಳು ಬಂಧಿಸಿದ್ದರು. ಈತನ ಬಳಿ ಪಾಕಿಸ್ತಾನಕ್ಕೆ ಸರಿದ ಕೆಲ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿವೆ.
ಪ್ರಮುಖವಾಗಿ ಗೋವಾದ ಕ್ಯಾಸಿನೋಗಳು, ಬೀಚ್ ಗಳು, ಬೀಚ್ ರೆಸಾರ್ಟ್ ಗಳು, ಕ್ರೂಸ್ ವೆಸೆಲ್ ಗಳು, ಬರ್ಜಸ್ ಗಳ ಭದ್ರತೆಯನ್ನು ಇಮ್ಮಡಿಗೊಳಿಸಲಾಗಿದೆ.