ಉಗ್ರರಿಂದ ಕಾರು ಹೈಜಾಕ್; ಪಂಜಾಬ್ ನಲ್ಲಿ ಹೈ ಅಲರ್ಟ್ ಘೋಷಣೆ
ಶಸ್ತ್ರಾಸ್ತ್ರಧಾರಿಗಳಾಗಿ ಬಂದಿರುವ ಉಗ್ರರು ವ್ಯಕ್ತಿಯನ್ನು ಬೆದರಿಸಿ ಕಾರನ್ನು ಹೈಜಾಕ್ ಮಾಡಿದ್ದು, ಈ ಹಿನ್ನಲೆಯಲ್ಲಿ ಪಂಜಾಬ್ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ...
ಚಂಡೀಗಢ: ಶಸ್ತ್ರಾಸ್ತ್ರಧಾರಿಗಳಾಗಿ ಬಂದಿರುವ ಉಗ್ರರು ವ್ಯಕ್ತಿಯನ್ನು ಬೆದರಿಸಿ ಕಾರನ್ನು ಹೈಜಾಕ್ ಮಾಡಿದ್ದು, ಈ ಹಿನ್ನಲೆಯಲ್ಲಿ ಪಂಜಾಬ್ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ.
ಭಾರತ-ಪಾಕಿಸ್ತಾನ ಗಡಿ ಗ್ರಾಮವಾಗಿರುವ ಬಂಬ್ಯಾಲ್ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಬೆದರಿಸಿದ್ದ ಉಗ್ರರು ಕಾರನ್ನು ಹೈಜಾಕ್ ಮಾಡಿದ್ದಾರೆಂಬ ಮಾಹಿತಿ ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಗುರುದಾಸ್ ಪುರ ಮತ್ತು ಪಠಾಣ್ ಕೋಟ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಕರೊಬ್ಬರನ್ನು ಬಿಡುವ ಸಲುವಾಗಿ ಮಸ್ಕಿನ್ ಅಲಿ ಎಂಬುವವರು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಆಲ್ಟೋ ಕಾರಿನಲ್ಲಿ ಬಮ್ಯಾಲ್ ಗ್ರಾಮದಿಂದ ತೆರಳುತ್ತಿದ್ದರು. ಈ ವೇಳೆ ಉಗ್ರರು ವ್ಯಕ್ತಿಯನ್ನು ಬೆದರಿಸಿ ಕಾರನ್ನು ಕಸಿದುಕೊಂಡಿದ್ದಾರೆ. ಕೂಡಲೇ ಅಲಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಹಿನ್ನಲೆಯಲ್ಲಿ ಗುರುದಾಸ್ ಪುರ ಹಾಗೂ ಪಠಾಣ್ ಕೋಟ್ ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಗಡಿ ಜಿಲ್ಲೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ತನಿಖೆ ಆರಂಭಿಸಿರುವ ಅಧಿಕಾರಿಗಳು ಅಲಿ ನೀಡಿರುವ ಮಾಹಿತಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ಸ್ಥಳದಲ್ಲಿಯೇ ಈ ಹಿಂದೆ ಪಂಜಾಬ್ ಪೊಲೀಸ್ ಎಸ್'ಪಿ ಸಲ್ವೀಂದರ್ ಸಿಂಗ್ ಅವರಿಂದ ಉಗ್ರರು ಕಾರನ್ನು ಹೈಜಾಕ್ ಮಾಡಿದ್ದರು. ಇದಾದ ಬಳಿಕ 2016ರಲ್ಲಿ ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 7 ಯೋಧರು ಹುತಾತ್ಮರಾಗಿದ್ದರು.