ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯದ ಅಧಿಕೃತ ವೆಬ್ ಸೈಟ್ ದಿಢೀರ್ ಸ್ಥಗಿತಗೊಂಡಿದ್ದು, ವೆಬ್ ಸೈಟ್ ಮೇಲ್ ಹ್ಯಾಕರ್ ಗಳು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇಂದು ಬೆಳಗ್ಗೆ ಸುಮಾರು 11.35ರ ಸುಮಾರಿನಲ್ಲಿ ವೆಬ್ ಸೈಟ್ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ವೆಬ್ ಸೈಟ್ ಹ್ಯಾಕ್ ಆದ ಕುರಿತು ಈ ವರೆಗೂ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಇನ್ನು ವೆಬ್ ಸೈಟಿನ ಮುಖಪುಟ ತೆರೆದರೆ ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಮ್ ಹ್ಯಾಕ್ (hackeado por HighTech Brazil HackTeam) ಎಂಬ ಬರಹ ಕಾಣುತ್ತಿದ್ದು, ಬ್ರೆಜಿಲ್ ಮೂಲದ ಹ್ಯಾಕರ್ ಗಳು ವೆಬ್ ಸೈಟ್ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕೂಡಲೇ ಎಚ್ಚೆತ್ತಿರುವ ಅಧಿಕಾರಿಗಳು ವೆಬ್ ಸೈಟ್ ಅನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದು, ವೆಬ್ ಸೈಟ್ ಸರಿಪಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ವೆಬ್ ಸೈಟ್ ನ ಕಾರ್ಯಾಚರಣೆ ಆರಂಭಿಸಿದ್ದು, ಇದಕ್ಕೂ ಮೊದಲು ವೆಬ್ ಸೈಟ್ ಪುಟ ತೆರೆದರೆ, site under maintenance, (ಸೈಟ್ ದುರಸ್ತಿಯಲ್ಲಿದೆ) ಎಂಬ ಸಂದೇಶ ಕಾಣುತ್ತಿದೆ. ಆದರೆ ಈ ವರೆಗೂ ಅಧಿಕಾರಿಗಳು ಮಾತ್ರ ವೆಬ್ ಸೈಟ್ ಹ್ಯಾಕ್ ಆಗಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ.