ಪಾಟ್ನಾ: ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ, ವಿರೋಧ ಪಕ್ಷಗಳೊಂದಿಗೆ ಸಭೆ ನಡೆಸಲಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಾಂಗ್ರೆಸ್ ನ್ನೂ ಒಳಗೊಂಡಂತೆ ಬಿಜೆಪಿಯೇತರ ಪಕ್ಷದ ನಾಯಕರು ಭಾಗಿಯಾಗುವ ನಿರೀಕ್ಷೆ ಇದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಯಶ್ವಂತ್ ಸಿನ್ಹಾ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಪಕ್ಷದ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಿಗೆ ಮೌನ ಮುರಿಯುವಂತೆ ಯಶ್ವಂತ್ ಸಿನ್ಹಾ ಆಗ್ರಹಿಸಿದ್ದಾರೆ. ಬಿಜೆಪಿಯ ಈಗಿನ ನಾಯಕತ್ವ ಉಳಿದ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡುತ್ತಿಲ್ಲ ಎಂದು ಯಶ್ವಂತ್ ಸಿನ್ಹಾ ಆರೋಪಿಸಿದ್ದಾರೆ.
ವಿರೋಧಪಕ್ಷಗಳ ನಾಯಕರೊಂದಿಗಿನ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಯಶ್ವಂತ್ ಸಿನ್ಹಾ ನಿರಾಕರಿಸಿದ್ದಾರೆ.