ನವದೆಹಲಿ: ನಗರ ವಾಸ ಯೋಗ್ಯತೆ ಸೂಚ್ಯಂಕ ಪಟ್ಟಿಯಲ್ಲಿ ಪುಣೆ ಮೊದಲ ಸ್ಥಾನ ಪಡೆದಿದ್ದು, ನವಿ ಮುಂಬೈ ಎರಡನೇ ಸ್ಥಾನದಲ್ಲಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 65ನೇ ಸ್ಥಾನದಲ್ಲಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸೋಮವಾರ ಹೇಳಿದ್ದಾರೆ.
ದೇಶದ ಒಟ್ಟು 111 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಗ್ರೇಟರ್ ಮುಂಬೈ ಮೂರನೇ ಸ್ಥಾನ, ತಿರುಪತಿ ನಾಲ್ಕನೆ ಸ್ಥಾನ, ಚಂಡಿಗಢ ಐದನೇ ಸ್ಥಾನ, ಥಾಣೆ ಆರನೇ ಸ್ಥಾನ, ರಾಯಪೂರ್ ಏಳನೇ ಸ್ಥಾನ, ಇಂದೋರ್ ಎಂಟನೇ ಸ್ಥಾನ, ವಿಜಯವಾಡ 9ನೇ ಸ್ಥಾನ ಹಾಗೂ ಭೋಪಾಲ್ 10ನೇ ಸ್ಥಾನ ಪಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.
ಚೆನ್ನೈ 14 ಸ್ಥಾನ ಪಡೆದಿದ್ದರೆ ದೆಹಲಿ 65 ಸ್ಥಾನ ಪಡೆದಿದ್ದು, ಉತ್ತರ ಪ್ರದೇಶದ ರಾಂಪುರ್ ಕೊನೆಯ ಸ್ಥಾನ ಪಡೆದಿದೆ.
ದೇಶದ ನಗರಗಳು ಎಷ್ಟರ ಮಟ್ಟಿಗೆ ವಾಸ ಯೋಗ್ಯವಾಗಿವೆ ಎಂಬುದನ್ನು ಅಲ್ಲಿನ ಆಡಳಿತ, ಸಾಮಾಜಿಕ ಸಂಸ್ಥೆಗಳು, ಆರ್ಥಿಕ ಮತ್ತು ಮೂಲಸೌಕರ್ಯ ಪ್ರಮುಖ ನಾಲ್ಕು ಮಾನದಂಡಗಳ ಮೂಲಕ ನಿರ್ಧರಿಸಲಾಗಿದೆ ಎಂದು ಪುರಿ ತಿಳಿಸಿದ್ದಾರೆ.