ವಾಘಾ(ಪಂಜಾಬ್): ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಶುಕ್ರವಾರ ಲಾಹೋರ್ ಗೆ ತೆರಳಿದ್ದಾರೆ.
ಲೋಹಾರ್ ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, ನಾನು ಸೌಹಾರ್ದ ರಾಯಭಾರಿಯಾಗಿ ಪಾಕ್ ಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಬದಲಾವಣೆ ಅತ್ಯಂತ ಮಹತ್ವದ್ದಾಗಿದ್ದು, ಆ ಕ್ಷಣಕ್ಕೆ ಸಾಕ್ಷಿಯಾಗಲು ಸ್ನೇಹಿತನಾಗಿ ಇಮ್ರಾನ್ ಖಾನ್ ನನಗೆ ಆಹ್ವಾನಿಸಿರುವುದು ನನ್ನ ಅದೃಷ್ಟ ಎಂದು ಭಾವಿಸುವುದಾಗಿ ಸಿಧು ತಿಳಿಸಿದ್ದಾರೆ.
ನಾನು ಸೌಹಾರ್ದ ರಾಯಭಾರಿಯಾಗಿ ಅಲ್ಲಿಗೆ ತೆರಳುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಭಾರತ - ಪಾಕಿಸ್ತಾನ ಸಂಬಂಧ ಸುಧಾರಣೆಯಾಗುವ ವಿಶ್ವಾಸವಿದೆ ಎಂದು ಮಾಜಿ ಕ್ರಿಕೆಟಿಗ ಸಿಧು ಹೇಳಿದ್ದಾರೆ.
ನಾಳೆ ಪಾಕಿಸ್ತಾನ ರಾಷ್ಟ್ರ ಅಧ್ಯಕ್ಷರ ಭವನದಲ್ಲಿ ಇಮ್ರಾನ್ ಖಾನ್ ಅವರ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.