ನವದೆಹಲಿ: ದೇಶದ ಶಾಸಕರು ಹಾಗೂ ಸಂಸದರ ವಿರುದ್ಧದ ಸುಮಾರು 4,122 ಕೇಸ್ ಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ, ಕೆಲವು ಪ್ರಕರಣಗಳಂತೂ ಸುಮಾರು 3 ದಶಕಗಳಿಂದಲೂ ಪೆಂಡಿಂಗ್ ಇವೆ ಎಂದು ಸುಪ್ರೀಂಕೋರ್ಟ್ ಮಾಹಿತಿ ನೀಡಿದೆ.
ಹಾಲಿ ಶಾಸಕರ ವಿರುದ್ದ ಇರುವ ಕ್ರಿಮಿನಲ್ ಕೇಸ್ ಗಳ ಬಗ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ತಿಳಿಸಿದೆ,.
ಎಲ್ಲಾ ರಾಜ್ಯಗಳ ಹಾಲಿ ಮತ್ತು ಮಾಜಿ ಶಾಸಕರುಗಳ ವಿರುದ್ಧ ವಿವಿಧ ಹೈಕೋರ್ಟ್ ಗಳಲ್ಲಿ ಇರುವ ಕ್ರಿಮಿನಲ್ ಕೇಸ್ ಗಳ ಬಗ್ಗೆ ಅಂಕಿ ಅಂಶ ಪ್ರಕಟಿಸಲಾಗಿದೆ, ಎಲ್ಲಾ ರಾಜ್ಯಗಳ ಹೈಕೋರ್ಟ್ ನಲ್ಲಿ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ವಿವರ ಸಲ್ಲಿಸುವಂತೆ ಕೇಳಲಾಗಿತ್ತು,
264 ಪ್ರಕರಣಗಳಿಗೆ ವಿವಿಧ ಹೈಕೋರ್ಟ್ ಗಳು ತಡೆ ನೀಡಿವೆ, ಕೆಲವು ಪ್ರಕರಣಗಳು ಸುಮಾರು 1991 ರಿಂದ ಇತ್ಯರ್ಥವಾಗದೇ ಹಾಗೇಯೆ ಉಳಿದಿವೆ, ಇನ್ನೂ ಆರೋಪ ಪಟ್ಟಿಯೇ ಸಿದ್ಧವಾಗಿಲ್ಲ.
ವಕೀಲೆ ಹಾಗೂ ಬಿಜೆಪಿ ಮುಖಂಡ ಅಶ್ವಿನಿ ಉಪಧ್ಯಾಯ್, ಶಿಕ್ಷೆಗೊಳಗಾಗಿರುವ ಹಾಗೂ ಆಜೀವ ನಿಷೇಧ ಮತ್ತು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ರಾಜಕಾರಣಿಗಳು ವಿವರ ನೀಡುವಂತೆ ಪಿಐಎಲ್ ಸಲ್ಲಿಸಿದ್ದರು.