

ಆಂಧ್ರಪ್ರದೇಶ: ಕೇಂದ್ರ ಬಜೆಟ್ ನಂತರ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಪಕ್ಷದ ಸಂಸದರು, ಹಿರಿಯ ಶಾಸಕರು ಹಾಗೂ ನಾಯಕರೊಂದಿಗೆ ಅಮರಾವತಿಯಲ್ಲಿ ಸಮಾಲೋಚನೆ ನಡೆಸಿದರು.
ಬಿಜೆಪಿಯೊಂದಿಗಿನ ಮೈತ್ರಿ ಪರಾಮರ್ಶೆಗಾಗಿ ಈ ಸಭೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
2018ರ ಕೇಂದ್ರ ಬಜೆಟ್ ನಲ್ಲಿ ಕೇಂದ್ರಹಣಕಾಸು ಸಚಿವ ಅರುಣ್ ಜೇಟ್ಲಿ ಆಂಧ್ರಪ್ರದೇಶಕ್ಕೆ ಕಡಿಮೆ ಅನುದಾನ ನೀಡಿರುವುದರಿಂದ ಚಂದ್ರಬಾಬು ನಾಯ್ಡು ತೀವ್ರ ಅಸಮಾಧಾನಗೊಂಡಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಖಂಡ ಕೆ. ರಾಮ್ ಮೋಹನ್ ರಾವ್, ಬಜೆಟ್ ಬಗ್ಗೆ ಚರ್ಚೆ ನಡೆಸಲಾಯಿತು. ರಾಜಕೀಯ ಮೈತ್ರಿ ಹಾಗೂ ರಾಜ್ಯ ಅಭಿವೃದ್ಧಿ ಎರಡೂ ಬೇರೆ ಬೇರೆ ವಿಚಾರಗಳಾಗಿವೆ ಎಂದರು.
ಎನ್ ಡಿಎ ಸರ್ಕಾರದ ಬಜೆಟ್ ಸಂತೋಷ ನೀಡಿಲ್ಲ. ಬಜೆಟ್ ನಲ್ಲಿ ಆಂಧ್ರಪ್ರದೇಶಕ್ಕೆ ಸೂಕ್ತ ಅನುದಾನ ಒದಗಿಸಿಲ್ಲಾ. ಸಂಸದರೆಲ್ಲಾರೂ ರಾಜೀನಾಮೆ ನೀಡಲು ಸಿದ್ಧರಾಗಿದ್ದೇವೆ. ಆದರೆ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಸಂಸದ ಪಿ. ರವೀಂದ್ರಬಾಬು ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಯುವುದು, ಸಂಸದರು ರಾಜೀನಾಮೆ ನೀಡುವುದು ಅಥವಾ ಮೈತ್ರಿ ಮುರಿದುಕೊಳ್ಳುವುದು ನಮ್ಮ ಮುಂದಿದ್ದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮತ್ತೋರ್ವ ಸಂಸದ ಟಿ. ಜಿ. ವೆಂಕಟೇಶ್ ತಿಳಿಸಿದ್ದಾರೆ.