ಅತ್ಯಾಚಾರ ಸಂತ್ರಸ್ತರಿಗೆ ಅಲ್ಪ ಪ್ರಮಾಣದ ಪರಿಹಾರ ಮೊತ್ತವನ್ನು ನೀಡುವ ಮೂಲಕ ಚಾರಿಟಿ ನಡೆಸುತ್ತಿದ್ದೀರಾ ಎಂದು ಮಧ್ಯಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ ತರಾಟೆಗೆ ತೆಗೆದುಕೊಂಡಿದೆ.
ನಿರ್ಭಯಾ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಗರಿಷ್ಠ ಹಣವನ್ನು ಪಡೆದ ರಾಜ್ಯಗಳಲ್ಲಿ ಒಂದಾಗಿರುವ ಮಧ್ಯಪ್ರದೇಶ ಪ್ರತಿ ಅತ್ಯಾಚಾರ ಸಂತ್ರಸ್ತರಿಗೆ 6,000 ದಿಂದ 6,500 ರುಪಾಯಿ ಪರಿಹಾರ ನೀಡಿರುವುದು ಆಘಾತಕಾರಿ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿದ್ದ ನಿರ್ಭಯಾ ಹೆಸರಿನಲ್ಲಿ ಕೇಂದ್ರ ಸರ್ಕಾರ ಮಹಿಳಾ ಸುರಕ್ಷತೆ ಮತ್ತು ಎನ್ಜಿಒಗಳ ಕಾರ್ಯಾಚಟುವಟಿಕೆಯನ್ನು ಬೆಂಬಲಿಸುವ ಸಲುವಾಗಿ 2013ರಲ್ಲಿ ನಿರ್ಭಯಾ ನಿಧಿ ಯೋಜನೆಯನ್ನು ಪ್ರಾರಂಭಿಸಿತ್ತು.
ರೇಪ್ ಸಂತ್ರಸ್ತರಿಗೆ ಪರಿಹಾರ ನೀಡಿರುವ ಕುರಿತು ಮಧ್ಯಪ್ರದೇಶ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಪರಿಶೀಲಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರು ಮಧ್ಯಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು (ಮಧ್ಯಪ್ರದೇಶ) ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ನೀವು ರೇಪ್ ಸಂತ್ರಸ್ತರಿಗೆ ಸರಾಸರಿ 6000 ರುಪಾಯಿ ಪರಿಹಾರ ನೀಡಿದ್ದೀರಾ. ನೀವೇನೂ ಚಾರಿಟಿ ನಡೆಸುತ್ತಿದ್ದೀರಾ? ನೀವು ಇದನ್ನು ಹೇಗೆ ಮಾಡಬಹುದು...ಅತ್ಯಾಚಾರಕ್ಕೆ ನೀವು ಕೇವಲ 6,500 ರುಪಾಯಿ ಬೆಲೆ ಕಟ್ಟುತ್ತೀರಾ ಎಂದು ಪ್ರಶ್ನಿಸಿದರು.
ನಿಮ್ಮ (ಮಧ್ಯಪ್ರದೇಶ) ಅಂಕಿ ಅಂಶಗಳು ಅದ್ಭುತವಾದವು. ರಾಜ್ಯದಲ್ಲಿ 1,951 ಅತ್ಯಾಚಾರ ಸಂತ್ರಸ್ತರಿದ್ದು ಅವರಿಗೆ 6000 ದಿಂದ 6500 ರುಪಾಯಿ ಪರಿಹಾರ ನೀಡಿದ್ದೀರಾ ಇದು ಸರಿಯೇ. ಇದು ಮೆಚ್ಚುವಂತದ್ದಾ? ಏನಿದು ಎಂದು ವಿಭಾಗೀಯ ಪೀಠ ಮಧ್ಯಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.
ನಿರ್ಭಯಾ ನಿಧಿ ಯೋಜನೆ ಅಡಿಯಲ್ಲಿ ರಾಜ್ಯ ಗರಿಷ್ಠ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು 1,951 ಅತ್ಯಾಚಾರ ಸಂತ್ರಸ್ತರಿಗೆ 1 ಕೋಟಿ ರುಪಾಯಿಯನ್ನು ಮಾತ್ರ ಬಳಸಿದ್ದೀರಾ ಕೇಳಿದೆ.
ಇನ್ನು ನಿರ್ಭಯಾ ನಿಧಿಯನ್ನು ಹಂಚಿರುವ ಕುರಿತು ಪ್ರಮಾಣಪತ್ರ ಸಲ್ಲಿಸಿದ ಹರಿಯಾಣ ಸರ್ಕಾರ ನ್ಯಾಯಾಲಯದಿಂದ ಚೀಮಾರಿ ಹಾಕಿಸಿಕೊಂಡಿತು.