ಚೆನ್ನೈ: ಈಗಾಗಲೇ ರಾಜಕೀಯ ಪ್ರವೇಶಿಸಿ, ಸ್ವತಂತ್ರ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿರುವ ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸ್ನೇಹ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕಡಿಮೆ ನೀರು ಹಂಚಿಕೆ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಮಲ್ ಹಾಸನ್ ಅವರು, ನದಿಗಳು ಯಾರಿಗೂ ಸೇರಿದ್ದಲ್ಲ. ನದಿ ನೀರನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ ಎಂದರು.
ತಮಿಳುನಾಡಿಗೆ ಕಡಿಮೆ ನೀರಿನ ಹಂಚಿಕೆ ಖಂಡಿತವಾಗಿ ನಿರಾಶಾದಾಯಕವಾಗಿದೆ, ಆದರೆ ರಾಜಕೀಯ ಪಕ್ಷಗಳು ಇದನ್ನೇ ಮತಬ್ಯಾಂಕ್ ರೀತಿ ನೋಡಬಾರದು' ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ.
ಕರ್ನಾಟಕ ಹಾಗೂ ತ.ನಾಡು ರೈತರು ಒಂದಾಗಬೇಕು ಎಂದು ಹೇಳಿರುವ ಕಮಲ್ ಹಾಸನ್, 'ಲಭ್ಯವಿರುವ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಾದ ಮಾರ್ಗಗಳು ಮತ್ತು ವಿಧಾನಗಳನ್ನು ನಾವು ಕಂಡುಕೊಳ್ಳಬೇಕಾಗಿದೆ. ಅಂತರ್ಜಲವನ್ನು ರಕ್ಷಿಸಲು ಸರ್ಕಾರ ವಿಫಲಗೊಂಡರೆ, ನಾವು ಅದನ್ನು ರಕ್ಷಿಸಬೇಕು' ಎಂದು ಹೇಳಿದರು.
ಸುಪ್ರೀಂ ಪ್ರಕಟಿಸಿರುವ ಅಂತಿಮ ತೀರ್ಪಿನಿಂದ ಕರ್ನಾಟಕ ಒಂದು ಮಟ್ಟಿಗೆ ನಿರಾಳಗೊಂಡಿದೆ. ತೀರ್ಪಿನಲ್ಲಿ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಕಡಿತಗೊಳಿಸಿ ಆದೇಶ ನೀಡಿರುವ ಕೋರ್ಟ್, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ಕಲ್ಪಿಸಿರುವುದು ಖುಷಿಯ ವಿಚಾರ. ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು ಎಂದು ಕೋರ್ಟ್ ಹೇಳಿದೆ.