ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್ ಅವರನ್ನು ದೆಹಲಿ ಕೋರ್ಟ್ 14 ದಿನ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಫೆಬ್ರವರಿ 16ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾಸ್ಕರರಾಮನ್ ಅವರನ್ನು ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಸ್ಟಾರ್ ಹೋಟೆಲ್ ವೊಂದರಲ್ಲಿ ಬಂಧಿಸಿದ್ದರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಫೆ.26ರ ವರೆಗೆ ತಮ್ಮ ವಶಕ್ಕೆ ಪಡೆದಿದ್ದರು. ಇಂದು ಮತ್ತೆ ಕೋರ್ಟ್ ಗೆ ಹಾಜರುಪಡಿಸಿ ಇನ್ನೂ ಮೂರು ದಿನ ಆರೋಪಿಯನ್ನು ತನ್ನ ವಶಕ್ಕೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮನವಿ ಮಾಡಿದರು.
ಇಡಿ ಮನವಿಯನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಧೀಶ ಎನ್ ಕೆ ಮಲ್ಹೋತ್ರಾ ಅವರು, ಆರೋಪಿ ಭಾಸ್ಕರರಾಮನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್ ಅವರನ್ನು ಬಂಧಿಸಿತ್ತು.
ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಕಾರ್ತಿ ವಿರುದ್ಧ ಲುಕ್ ಔಟ್ ನೋಟಿಸ್ ಸಹ ನೀಡಿದೆ.