ಚೆನ್ನೈ: ಸಂಕ್ರಾಂತಿ ಪ್ರಯುಕ್ತ ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಗೂಳಿ ಹಾಯ್ದು ಮೂವರು ಪ್ರೇಕ್ಷಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಇಲ್ಲಿಂದ ಸುಮಾರು 500 ಕಿ.ಮೀ.ದೂರದಲ್ಲಿರುವ ಶಿವಗಂಗಾ ಜಿಲ್ಲೆಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಇಬ್ಬರು ಪ್ರೇಕ್ಷಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚೆನ್ನೈನಿಂದ ಸುಮಾರು 350 ಕಿ.ಮೀ.ದೂರದಲ್ಲಿರುವ ತಿರುಚಿ ಜಿಲ್ಲೆಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಓರ್ವ ಪ್ರೇಕ್ಷಕ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಸಂಕ್ರಾಂತಿ ಪ್ರಯುಕ್ತಿ ನಿನ್ನೆ ಮದುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಅವರು ಜಂಟಿಯಾಗಿ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಿದ್ದರು.
ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಈ ಸ್ಪರ್ಧೆಯಲ್ಲಿ ಸುಮಾರು 1 ಸಾವಿರ ಗೂಳಿಗಳು ಭಾಗವಹಿಸಿದ್ದವು.