ಫೇಸ್ಬುಕ್ ಮದುವೆಗಳು ಮುರಿದು ಬೀಳುವುದೆ ಹೆಚ್ಚು: ಗುಜರಾತ್ ಹೈಕೋರ್ಟ್
ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾಗಿ ಆಗುವ ಮದುವೆಗಳು ದೀರ್ಘಕಾಲ ಬಾಳಿಕೆ ಬರುವುದಿಲ್ಲ ಹಾಗೂ ಅವುಗಳು ವಿಫಲವಾಗುವುದೇ ಹೆಚ್ಚು ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ...
ಅಹಮದಾಬಾದ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾಗಿ ಆಗುವ ಮದುವೆಗಳು ದೀರ್ಘಕಾಲ ಬಾಳಿಕೆ ಬರುವುದಿಲ್ಲ ಹಾಗೂ ಅವುಗಳು ವಿಫಲವಾಗುವುದೇ ಹೆಚ್ಚು ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜ್ ಕೋಟ್ ಮೂಲದ ಫಾನ್ಸಿ ಷಾ ಎಂಬಾಕೆ ನವಸಾರಿ ಮೂಲದ ತನ್ನ ಪತಿ ಜೈದೀಪ್ ಷಾ ಮತ್ತಾತನ ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ.
ಇನ್ನು ಪ್ರಕರಣದಲ್ಲಿ ಫಾನ್ಸಿ ಶಾಗೆ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳುವಂತೆ ನ್ಯಾಯಪೀಠ ಸಲಹೆ ನೀಡಿದೆ. ಫೇಸ್ ಬುಕ್ ಮೂಲಕ ಪರಸ್ಪರ ಪರಿಚಿತರಾಗಿದ್ದ ಜೈದೀಪ್ ಮತ್ತು ಫಾನ್ಸಿ ಮದುವೆಯಾಗಿದ್ದರು.
ಮದುವೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಜೈದೀಪ್ ಹಾಗೂ ಆತನ ಕುಟುಂಬದವರ ವಿರುದ್ಧ ಫಾನ್ಸಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಳು.