ನವದೆಹಲಿ: ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗ್ಲೆಯನ್ನು ಖಾಲಿ ಮಾಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಉತ್ತರಪ್ರದೇಶ ಮಾಜಿ ಸಿಎಂ, ಬಹುಜನ ಸಮಾಜಪಕ್ಷದ ವರಿಷ್ಟೆ ಮಾಯಾವತಿ ಅವರು 15 ಕೋಟಿ ರು. ಮೌಲ್ಯದ ಹೊಸ ಬಂಗ್ಲೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.
ಮಾಯಾವತಿ ಸಿಬ್ಬಂದಿಗಳು ಸರ್ಕಾರಿ ಬಂಗ್ಲೆಯಲ್ಲಿದ್ದ ಸಾಮಾನು ಸರಂಜಾಮುಗಳನ್ನು ನೂತನ ಬಂಗ್ಲೆಗೆ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸದ್ಯ ವಾಸ್ತವ್ಯ ಹೂಡಿದ್ದ 13ಎ ಮಾಲ್ ಅವೆನ್ಯೂ ಸರ್ಕಾರಿ ಬಂಗ್ಲೆಯ ಕೂಗಳತೆ ದೂರದಲ್ಲಿ ಮಾಯಾವತಿಯ 9 ಮಾಲ್ ಅವೆನ್ಯೂ ಬಂಗ್ಲೆ ಇದೆ.
2007ರಲ್ಲಿ ಮಾಯಾವತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದ ನಂತರ ಈ ಬಂಗ್ಲೆಯನ್ನು ಖರೀದಿಸಿದ್ದರು. ಈ ಬಂಗ್ಲೆ 70 ಸಾವಿರ ಚದರ ಅಡಿ ಹೊಂದಿದೆ. 2012ರಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಮಾಯಾವತಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ 15 ಕೋಟಿ ರುಪಾಯಿ ಮೌಲ್ಯದ ಬಂಗ್ಲೆಯನ್ನು ಖರೀದಿಸಿರುವುದನ್ನು ಉಲ್ಲೇಖಿಸಿದ್ದರು.