

ಭೂಪಾಲ್ : ದೇಶದ ಅತ್ಯಂತ ಹಳೆಯದಾದ ಕಾಂಗ್ರೆಸ್ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ- ಆರ್ ಎಸ್ ಎಸ್ ಅನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಬೀತ್ ಪಾತ್ರ, ರಾಮ ಮಂದಿರ ನಿರ್ಮಾಣ ಹಾಗೂ ಆರ್ ಎಸ್ ಎಸ್ ಶಿಬಿರಗಳನ್ನು ಆಯೋಜಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಒಂದು ವೇಳೆ ಮಧ್ಯಪ್ರದೇಶ ಚುನಾವಣೆಯಲ್ಲಿ ಗೆದ್ದರೆ ಸರ್ಕಾರಿ ಕಚೇರಿಗಳಲ್ಲಿ ಆರ್ ಎಸ್ ಎಸ್ ಶಿಬಿರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆ ಪಕ್ಷದ ಪ್ರಣಾಳಿಕೆಯಲ್ಲಿಯೇ ಹೇಳಲಾಗಿದೆ ಎಂದರು.
ನಕ್ಸಲ್ ಚಟುವಟಿಕೆಯನ್ನು ಕ್ರಾಂತಿಕಾರಿ ಪ್ರಕ್ರಿಯೆ ಎಂದು ಕರೆಯುವ ಕಾಂಗ್ರೆಸ್ , ಸಮಾಜ ಸೇವೆಯಲ್ಲಿ ತೊಡಗಿರುವ ಆರ್ ಎಸ್ ಎಸ್ ನ್ನು ನಿಷೇಧಿಸುವಂತೆ ಆಗ್ರಹಿಸುತ್ತಿದೆ. ರಾಮ ಅಸ್ತಿತ್ವದಲ್ಲಿ ಇಲ್ಲ ಎಂದು ದಶಕದಿಂದಲೂ ಹೇಳಿಕೊಂಡು ಬರುತ್ತಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಆರ್ ಎಸ್ ಎಸ್ ನ್ನು ಉಗ್ರ ಸಂಘಟನೆ ಮುಸ್ಲಿ ಬ್ರಾದರ್ ಹುಡ್ ನೊಂದಿಗೆ ಹೋಲಿಸಿರುವುದನ್ನು ಖಂಡಿಸಿದ ಸಂಬೀತ್ ಪಾತ್ರ, ಕಾಂಗ್ರೆಸ್ ಪಕ್ಷದ ಹಿರಿಯ ನಾಕರ ದಿಗ್ವಿಜಯ್ ಸಿಂಗ್, ಜಾಕೀರ್ ನಾಯಕ್, ಒಸಾಮಾ ಬಿನ್ ಲಾಡೆನ್, ಮತ್ತು ಪಾಕಿಸ್ತಾನದ ಬೆಂಬಲಿಗ ಎಂದು ವ್ಯಂಗ್ಯವಾಡಿದರು.