ನವದೆಹಲಿ: ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರು ಶಾಮೀಲಾಗಿದ್ದಾರೆ ಎನ್ನಲಾದ ಸಿಬಿಐ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಇಲಾಖೆಯ ಡಿಎಸ್ ಪಿ ದೇವೇಂದ್ರ ಕುಮಾರ್ ಅವರಿಗೆ ಬುಧವಾರ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ದೇವೇಂದ್ರ ಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ, ಸಂತೋಶ್ ಸ್ನೇಹಿ ಮನ್ ಅವರು, 50 ಸಾವಿರ ರುಪಾಯಿ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ.
ದೇವೇಂದ್ರ ಕುಮಾರ್ ಜಾಮೀನಿಗೆ ಸಿಬಿಐ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ ಆರೋಪಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ನಿನ್ನೆಯಷ್ಟೇ ದೆಹಲಿ ಕೋರ್ಟ್ ದೇವೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಮನೋಜ್ ಪ್ರಸಾದ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು.