ಸೆಕ್ಷನ್ 377 ಕುರಿತು ನಾಳೆ ಸುಪ್ರೀಂ ಕೋರ್ಟ್ ನಿಂದ ತೀರ್ಪು ಪ್ರಕಟ ಸಾಧ್ಯತೆ

ಬಹು ನಿರೀಕ್ಷಿತ, ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಮಾನ್ಯತೆ....
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಬಹು ನಿರೀಕ್ಷಿತ, ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನಾಳೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. 
ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಕಳೆದ ಜುಲೈ 17 ರಂದು ತೀರ್ಪು ಕಾಯ್ದಿರಿಸಿದೆ.
ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿದೆ. ಆದರೆ, ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ಸರ್ಕಾರ ವ್ಯಕ್ತಪಡಿಸಿತ್ತು.
ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್ ದೆಹಲ್ಲಿ ಹೈಕೋರ್ಟ್‌ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧ ವೆಂದು ಘೋಷಿಸಿತ್ತು. ನಂತರ, ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಐವರು ಅರ್ಜಿ ಸಲ್ಲಿಸಿದ್ದು, ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ಐಪಿಸಿ ಸೆಕ್ಷನ್‌ 377 ಹೇಳುವುದೇನು?
ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಯಾರಾದರೂ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿದ್ದು, ಅಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಹಾಗೂ ದಂಡ ವಿಧಿಸ ಬಹುದು ಎಂದು ಈ ಸೆಕ್ಷನ್‌ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com