

ನವದೆಹಲಿ: ಮಹಿಳೆಯರ ವಿರುದ್ಧದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದ ಜನ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷವು ಅನೇಕ ವಿಷಯಗಳ ಬಗ್ಗೆ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿರುವುದರಿಂದ ದೇಶವು ಅದನ್ನು ಕ್ಷಮಿಸುವುದಿಲ್ಲ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
"ಇಂದು ಮತ್ತೊಮ್ಮೆ, ರಾಹುಲ್ ಗಾಂಧಿ ಮಹಿಳೆಯರನ್ನು ಅವಮಾನಿಸಿದ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದರು, "ಈಗ ಅವರು ಕ್ಷಮೆಯಾಚಿಸಿದರೂ ಸಾರ್ವಜನಿಕರು ಅವರನ್ನು ಕ್ಷಮಿಸುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವರು ಹೇಳಿದರು.
ರಾಹುಲ್ ಗಾಂಧಿಯವರೇ, ನಿಮಗೆ ಹೆಚ್ಚು ಸೂಕ್ತವಾದ ಹೆಸರು ರಾಹುಲ್ ಜಿನ್ನಾ. ನಿಮ್ಮ ಮುಸ್ಲಿಂ ತುಷ್ಟೀಕರಣ ರಾಜಕಾರಣ ಮತ್ತು ಮನೋಧರ್ಮವು ನಿಮ್ಮನ್ನು ಮುಹಮ್ಮದ್ ಅಲಿ ಜಿನ್ನಾ ಅವರ ಯೋಗ್ಯ ಪರಂಪರೆಯನ್ನಾಗಿ ಮಾಡುತ್ತದೆಯೇ ಹೊರತು ಸಾವರ್ಕರ್ ಅವರ ಪರಂಪರೆ ಅಲ್ಲ" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾವಿರ ಜನ್ಮಗಳನ್ನು ತೆಗೆದುಕೊಂಡರೂ ಅವರು 'ಸಾವರ್ಕರ್' ಆಗಲು ಸಾಧ್ಯವಿಲ್ಲ ಮತ್ತು ಹೊಸ ಹೆಸರನ್ನು ಬಯಸಿದರೆ ಅವರನ್ನು 'ರಾಹುಲ್ ಶಾರ್ಮ್ಕರ್' ಎಂದು ಮರುನಾಮಕರಣ ಮಾಡಬಹುದು ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ. ರಾಹುಲ್ ಸಾವಿರ ಜನ್ಮತಳೆದರೂ ಅವರು ಸಾವರ್ಕರ್ ಆಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಹೌದು, ನಿಮ್ಮ ಹೆಸರನ್ನು ಬದಲಾಯಿಸಬೇಕಾಗಿದೆ, ಇಂದಿನಿಂದ ನಾವು ಅವರನ್ನು ರಾಹುಲ್ ''ಥೋಡಾ ಶಾರ್ಮ್ಕರ್'' (ಸ್ವಲ್ಪ ಅವಮಾನ) ಎಂದು ಕರೆಯುತ್ತೇವೆ ಎಂದು ಸಂಬಿತ್ ಪಾತ್ರಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 'ಮೇಕ್ ಇನ್ ಇಂಡಿಯಾ' ಅನ್ನು 'ರೇಪ್ ಇನ್ ಇಂಡಿಯಾ' ಎಂದು ಕರೆಯುವ ವ್ಯಕ್ತಿಗೆ ಈ ಹೆಸರು ಸೂಕ್ತವಾಗಿದೆ ಎಂದು ಅವರು ಹೇಳಿದರು.
ವೀರ ಸಾವರ್ಕರ್ ಅವರು ಕ್ಷಮೆಯಾಚಿಸಿದ ಹೇಡಿಯಾಗಿದ್ದರು ಎಂದು ಹೇಳಿರುವ ರಾಹುಲ್ ಗಾಂಧಿಯನ್ನು ಶಿವಸೇನೆ ರಕ್ಷಿಸುವುದನ್ನು ಎದುರು ನೋಡುತ್ತಿದ್ದೇನೆ! ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ನಲ್ಲಿ ಸವಾಲು ಹಾಕಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಅವರು, '' ರಾಹುಲ್ ಗಾಂಧಿ ಹೇಳಿದ್ದು ಸರಿ. ಅವರು ಎಂದಿಗೂ ‘ರಾಹುಲ್ ಸಾವರ್ಕರ್’ ಆಗಲು ಸಾಧ್ಯವಿಲ್ಲ. ವೀರ್ ಸಾವರ್ಕರ್ ರಾಷ್ಟ್ರೀಯ ಐಕಾನ್ ಆಗಿದ್ದರು. ಅವರು ಭಾರತದ ರಾಜಕೀಯದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಮುಂದಿನ ಪೀಳಿಗೆಗೆ ಪೂಜ್ಯರಾಗಿರುತ್ತಾರೆ. ನೆಹರೂ-ಗಾಂಧಿ ಕುಟುಂಬದ ಐದು ತಲೆಮಾರಿನವರು ಅವರ ಪರಂಪರೆಯನ್ನು ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ನಿರ್ಮೂಲನವನ್ನು ಕಾಂಗ್ರೆಸ್ ವಿರೋಧಿಸಿದೆ, 370 ನೇ ವಿಧಿಯನ್ನು ವಿರೋಧಿಸಿದೆ, ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು ವಿರೋಧಿಸಿತು, ರಾಮನ ಅಸ್ತಿತ್ವವನ್ನು ಸಂಪೂರ್ಣವಾಗಿ ನಿರಾಕರಿಸಿತು ಮತ್ತು ರಾಮ ಜನ್ಮ ಭೂಮಿ ನಿರ್ಧಾರವನ್ನು ಮುಂದೂಡಲು ಸರ್ವ ಪ್ರಯತ್ನ ಮಾಡಿತು ಎಂದು ಜಾವಡೇಕರ್ ಆರೋಪಿಸಿದ್ದಾರೆ.
ಪ್ರಮುಖ ವಿರೋಧ ಪಕ್ಷವಾಗಿ ಮತ್ತು ಪಾಕಿಸ್ತಾನವಾಗಿ ಒಂದೇ ಬಾರಿ ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾಂಗ್ರೆಸ್ ಉತ್ತರಿಸಬೇಕು ಎಂದು ಅವರು ಹೇಳಿದರು.