

ನವದೆಹಲಿ: ತಮ್ಮನ್ನು ಭಯೋತ್ಪಾದಕಿ ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದ ಬಿಜೆಪಿ ಸದಸ್ಯೆ ಪ್ರಾಗ್ಯ ಠಾಕೂರ್ ಅವರ ದೂರನ್ನು ವಿಶೇಷ ಹಕ್ಕು ಸಮಿತಿಗೆ ಕಳುಹಿಸಲಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಧ ಸದಸ್ಯರ ವಿರುದ್ಧ ಇರುವ ದೂರನ್ನು ಸಂಬಂಧಪಟ್ಟ ಸಮಿತಿಗೆ ತಾವು ಕಳುಹಿಸಿದ್ದು, ಆ ಸಮಿತಿಗಳ ಸದಸ್ಯರು ಕೇಸು ದಾಖಲಿಸಬೇಕೆ, ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಲಿದೆ ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನ ನಿನ್ನೆಗೆ ಮುಕ್ತಾಯವಾಗಿದ್ದು ಲೋಕಸಭೆಯಲ್ಲಿ ಕೆಲ ದಿನಗಳ ಹಿಂದೆ ಸಂಸದೆ ಪ್ರಾಗ್ಯ ಠಾಕೂರ್ ಮಹಾತ್ಮಾ ಗಾಂಧೀಜಿಯವರ ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆಯನ್ನು ಹೊಗಳುವ ಮೂಲಕ ತೀವ್ರ ವಿವಾದವೆಬ್ಬಿಸಿದ್ದರು. ನಂತರ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಪ್ರಾಗ್ಯ ಠಾಕೂರ್ ಅವರನ್ನು ಭಯೋತ್ಪಾದಕಿ ಎಂದು ಕರೆದಿದ್ದರು.
ಮಾಲೆಂಗಾವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಧ್ವಿ ಪ್ರಾಗ್ಯ ಠಾಕೂರ್ ನಂತರ ಲೋಕಸಭೆಯಲ್ಲಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು. ನಂತರ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ದೂರನ್ನು ನೀಡಿದ್ದರು.