

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ವಿರೋಧಿಸಿ ಅಸ್ಸಾಂ ರಾಜ್ಯಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಹೇರಿಕೆಯಾಗಿದ್ದ ಕರ್ಫ್ಯೂವನ್ನು ಮಂಗಳವಾರ ಹಿಂಪಡೆಯಲಾಗಿದೆ.
ಇಂದು ಗುವಾಹಟಿಯಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು, ಬಸ್ಸು, ಕಾರು ಮತ್ತು ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ನಿನ್ನೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅಧ್ಯಕ್ಷತೆಯಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ರಾಜ್ಯದಲ್ಲಿನ ಕಾನೂನು, ಸುವ್ಯವಸ್ಥೆಯನ್ನು ಪರಿಶೀಲಿಸಿ ಕರ್ಫ್ಯೂ ಹೇರಿಕೆಯನ್ನು ಸಡಿಲಿಸಲಾಯಿತು.
ಇದುವರೆಗೆ ಪೊಲೀಸರು ಗುಂಡು ಹಾರಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ತಿಳಿಸಿದರು. ಜನರನ್ನು ರಕ್ಷಿಸಲು ಮತ್ತು ಆಸ್ತಿ ರಕ್ಷಣೆಗೆ, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗುಂಡು ಹಾರಿಸಲೇಬೇಕಾಯಿತು. ಇಲ್ಲಿಯವರೆಗೆ 136 ಕೇಸುಗಳು ದಾಖಲಾಗಿದ್ದು 190 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಈ ಪ್ರತಿಭಟನೆಯಲ್ಲಿ ತೊಡಗಿರುವವರು ಸಾಮಾನ್ಯ ಪ್ರತಿಭಟನಾಕಾರರು ಅಲ್ಲ, ಅವರು ಪಿತೂರಿ ನಡೆಸಿ ಹಿಂಸಾಕೃತ್ಯದಲ್ಲಿ ತೊಡಗಿದವರು, ಇದರಲ್ಲಿ ಹಲವು ಪ್ರಮುಖ ಸಂಘಟನೆಗಳ ನಾಯಕರೂ ಇದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ನಡೆದಿದ್ದು, ರೈಲ್ವೆ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕು, ಬಸ್ ನಿಲ್ದಾಣ, ಅಂಗಡಿಗಳು, ಹಲವು ವಾಹನಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲಾಗಿದ್ದು ತೀವ್ರ ನಷ್ಟವಾಗಿದೆ. ಪಿಟಿಐ ಸುದ್ದಿಸಂಸ್ಥೆ ಪ್ರಕಾರ ಐವರು ಇಲ್ಲಿಯವರೆಗೆ ಪ್ರತಿಭಟನೆ, ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.