ಮಹಾದಾಯಿ: ಗೋವಾ ಒತ್ತಡಕ್ಕೆ ಮಣಿದ ಕೇಂದ್ರ, ರಾಜ್ಯಕ್ಕೆ ಮತ್ತೆ ಅನ್ಯಾಯ

ಮಹದಾಯಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ಗೋವಾ ಒತ್ತಡಕ್ಕೆ ಮಣಿದಿದ್ದು, ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಮಹದಾಯಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ಗೋವಾ ಒತ್ತಡಕ್ಕೆ ಮಣಿದಿದ್ದು, ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. 

ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ತಾನು ಕಳೆದ ತಿಂಗಳು ನೀಡಿದ್ದ ಅನುಮತಿಯನ್ನು ನ್ಯಾಯಾಲಯ ವಿಚಾರಣೆಯ ನೆಪವೊಡ್ಡಿ ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿಟ್ಟಿದೆ. 

ಅ.17ರಂದುಕೇಂದ್ರ ಪರಿಸರ ಇಲಾಖೆಯು ರಾಜ್ಯದ ನೀರಾವರಿ ನಿಗಮಕ್ಕೆ ಪತ್ರ ಬರೆದು ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜನರು ತಮ್ಮ ನಾಲ್ಕು ದಶಕಗಳ ಹೋರಾಟ ಕೈಗೂಡಿ ಮಹದಾಯಿ ನೀರು ಮಲಪ್ರಭೆಗೆ ಹರಿದು ಐದಾರು ಜಿಲ್ಲೆಗಳ ನೀರಿನ ಬವಣೆಗೆ ಶೀಘ್ರ ಸ್ಪಂದನೆ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅತ್ತ ಗೋವಾದ ಸಿಎಂ ಪ್ರಮೋದ್ ಸಾವಂತ್ ಸರ್ವಪಕ್ಷಗಳ ನಿಯೋಗವೊಂದನ್ನು ಕರೆದುಕೊಂಡು ಸಚಿವ ಪ್ರಕಾಶ್ ಜವಡೇಕರ್ ಅವರನ್ನು ಭೇಟಿಯಾಗಿದ್ದರು. 

ಕರ್ನಾಟಕ್ಕೆ ಕಳಸಾ ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ನೀಡಿರುವ ಅವಕಾಶವನ್ನು ರದ್ದುಪಡಿಸಬೇಕು ಎಂದು ಒತ್ತಡ ಹೇರಿದ್ದರು. 

ಅವರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಇದೀಗ ತಿಂಗಳ ಹಿಂದೆ ತಾನೇ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ ಎಂದು ಹೇಳಲಾಗಿದೆ. 

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮಧ್ಯೆ ಮಹದಾಯಿ ನದಿ ನೀರನ್ನು ಹಂಚಿ 2019ರ ಆ.14ರಂದು ಮಹದಾಯಿ ನ್ಯಾಯಾಧಿಕರಣ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮೂರು ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಪ್ರಸ್ತುತ ಈ ಪ್ರಕರಣ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ಈ ಹಿಂದೆ ನೀಡಿದ್ದ ಅನುಮತಿಯನ್ನು ಅಮಾನತಿನಲ್ಲಿಡುತ್ತಿದ್ದೇವೆಂದು ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ. 

ಈ ಹಿಂದೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗಲೂ ಕಳಸಾ ಬಂಡೂರಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದ ಸರ್ಕಾರ ಬಳಿಕ ಗೋವಾ ಒತ್ತಡಕ್ಕೆಮಣಿದು ಆ ಅನುಮತಿಯನ್ನು ಅಮಾನತಿನಲ್ಲಿಟ್ಟಿತ್ತು. ಆ ಬಳಿಕವೇ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿ ಸುಪ್ರೀಂ ನಿರ್ದೇಶನದ ಮೇರೆಗೆ ನ್ಯಾಯಾಧಿಕರಣ ರಚನೆಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com