ಜಮ್ಮು: ಪಾಕಿಸ್ತಾನ ಸೇನೆ ಮತ್ತೊಮ್ಮೆ ಕದನವಿರಾಮ ಒಪ್ಪಂದ ಉಲ್ಲಂಘನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ.
ಇಂದು ಬೆಳಗ್ಗೆ 10.30ರ ಸುಮಾರಿಗೆ ರಜೌರಿ ಜಿಲ್ಲೆಯ ನೌಶೆರಾ ಮತ್ತು ಸುಂದರ್‌ಬನಿ ವಲಯದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದು, ಇದು ಒಂದೇ ದಿನ ನಡೆಯುತ್ತಿರುವ ಮೂರನೇ ದಾಳಿಯಾಗಿದೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ.
ಭಾರತೀಯ ಪಡೆ ಕೂಡ ಪ್ರಬಲ ಪ್ರತಿದಾಳಿ ನಡೆಸಿದ್ದು, ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಇದಕ್ಕೂ ಮೊದಲು ಬೆಳಗ್ಗೆ 4.30ರ ಸುಮಾರಿಗೆ ಪಾಕಿಸ್ತಾನ ಸೈನಿಕರು ಕೃಷ್ಣ ಘಾಟಿ ವಲಯದಲ್ಲಿ ಭಾರೀ ಗುಂಡಿನ ದಾಳಿ ನಡೆಸಿದ್ದರು.
ಮಂಗಳವಾರ ಸಂಜೆ 6 ಗಂಟೆಗೆ ಪಾಕಿಸ್ತಾನ ಸೈನಿಕರು ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಮೋರ್ಟಾರ್ಗಳೊಂದಿಗೆ ಶೆಲ್ ದಾಳಿ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆ ರಜೌರಿಯ ನೌಶೆರಾ ವಲಯದಲ್ಲಿ ಅಪ್ರಚೋದಿತ ದಾಳಿ ನಡೆಸಿತ್ತು. ಸೋಮವಾರ ಬೆಳಗ್ಗೆ ಜಮ್ಮು ವಲಯದ ಅಕ್ನೋರ್ ಬಳಿಯ ಎಲ್‌ಒಸಿ ಬಳಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತ್ತು.
ಮಾರ್ಚ್ 1ರಂದು ಪಾಕಿಸ್ತಾನ ಪಡೆ ಪೂಂಚ್ ಜಿಲ್ಲೆಯಲ್ಲಿ ಗಡಿ ಠಾಣೆ ಮತ್ತು ಗ್ರಾಮಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಒಂಬತ್ತು ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು.
ಫೆಬ್ರವರಿ 28ರಂದು ಪೂಂಚ್ ಮತ್ತು ರಜೌರಿ ಜಿಲ್ಲೆಯ ಗಡಿಯ ಹೊರಠಾಣೆಗಳ ಮೇಲೆ ನಡೆದ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಮಾತ್ರವಲ್ಲ ಓರ್ವ ಸೈನಿಕ ಗಾಯಗೊಂಡಿದ್ದರು.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಹೊರಠಾಣೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೈನಿಕರು ನಡೆಸುತ್ತಿರುವ ಸತತ 16ನೇ ದಿನದ ದಾಳಿಯಾಗಿದೆ. ಗಡಿ ಭಾಗದಲ್ಲಿ ನೆಲೆಸಿರುವ ನಿವಾಸಿಗಳು ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ.
2018ರಲ್ಲಿ ಪಾಕಿಸ್ತಾನ ಪಡೆಗಳು ಅತಿ ಹೆಚ್ಚು 2,936 ಬಾರಿ ಕದನವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸಿವೆ.