

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸಾಮರಸ್ಯಕ್ಕೆ ಬಂದು ಇನ್ನೇನು ಸರ್ಕಾರ ರಚನೆ ಮಾಡುತ್ತವೆ ಅನ್ನುವಷ್ಟರಲ್ಲಿ ಹೊಸ ಬೆಳವಣಿಗೆಗಳನ್ನು ನಡೆದಿವೆ.
ನಿನ್ನೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡುತ್ತದೆ ಎಂದು ಅಂದುಕೊಂಡಿದ್ದರೆ ಆಗಿದ್ದೇ ಬೇರೆ. ಶಿವಸೇನೆಯಿಂದ ಇನ್ನೂ ಬೆಂಬಲ ಸಿಗದಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಜಾರಬಹುದು ಎಂಬ ಭಯದಿಂದ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲೇ ಇಲ್ಲ.
ಇನ್ನೊಂದೆಡೆ ಶಿವಸೇನೆ ತನ್ನ ಶಾಸಕರ ಮೊಬೈಲನ್ನು ಪಡೆದುಕೊಂಡು ಅವರನ್ನೆಲ್ಲಾ ಖಾಸಗಿ ಹೊಟೇಲ್ ನಲ್ಲಿ ಇರಿಸಿದೆ.ತನ್ನ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ, ಅಧಿಕಾರ ಸಮಾನಯುತವಾಗಿ ಹಂಚಿಕೆಯಾಗಬೇಕು ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಬೇಕೆಂಬುದು ಶಿವಸೇನೆಯ ಆಗ್ರಹವಾಗಿದೆ. ಬಿಜೆಪಿಯ ಬೆಂಬಲವಿಲ್ಲದೆ ತನಗೆ ಸರ್ಕಾರ ರಚಿಸಲು ಅವಕಾಶವಿದೆ ಎಂದು ಹೇಳುತ್ತಿದೆ ಶಿವಸೇನೆ. ನಿನ್ನೆ ಬಾಂದ್ರಾದ ಶಿವಸೇನೆ ಕಚೇರಿಯ ಹತ್ತಿರವಿರುವ ರಂಗಶಾರದ ಹೊಟೇಲ್ ನಲ್ಲಿ ಕುದುರೆ ವ್ಯಾಪಾರದ ಭೀತಿಯಿಂದ ಶಿವಸೇನೆ ಶಾಸಕರನ್ನು ಬಂಧಿಯಾಗಿಟ್ಟಿದೆ.
ಇನ್ನೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರಿಗೆ ಮುಂಬೈಗೆ ಬರಹೇಳಿದ್ದು ಇಂದು ಸಭೆ ನಡೆಯಲಿದೆ. ತಮ್ಮ ಭಾಗವಾಗಿ ರಾಜ್ಯಪಾಲ ಅಡ್ವೊಕೇಟ್ ಜನರಲ್ ಅವರನ್ನು ಸಂಪರ್ಕಿಸಿ ಸರ್ಕಾರ ರಚನೆ ವಿಳಂಬ ಮತ್ತು ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಮಾತುಕತೆ ನಡೆಸಿದ್ದಾರೆ.ಅವರು ಬೇರೆ ಪಕ್ಷಗಳಿಗೆ ಸರ್ಕಾರ ರಚಿಸಲು ಆಹ್ವಾನ ನೀಡುತ್ತಾರೋ, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವಂತೆ ಹೇಳುತ್ತಾರೆಯೋ ಕಾದುನೋಡಬೇಕಿದೆ.