

ನವದೆಹಲಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್'ಸಿಪಿ ಹಾಗೂ ಶಿವಸೇನೆ ಮೈತ್ರಿಗೊಳ್ಳುವುದು ಬಹುತೇಕ ಖಚಿತವಾಗುತ್ತಿದ್ದು, ಈ ನಡುವಲ್ಲೇ ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಪ್ರಧಾನಿ ಮೋದಿಯವರನ್ನು ಶರದ್ ಪವಾರ್ ಅವರು ಭೇಟಿ ಮಾಡಲಿದ್ದು, ರೈತರು, ಕೃಷಿ ಭೂಮಿ, ಅಕಾಲಿಕ ಮಳೆ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಇನ್ನಿತರೆ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಷ್ಟೇ ಪ್ರಧಾನಿ ಮೋದಿಯವರು ಎನ್'ಸಿಪಿ ಮುಖ್ಯಸ್ಥರನ್ನು ಕೊಂಡಾಡಿದ್ದರು.
ರಾಜ್ಯಸಭೆಯ ಐತಿಹಾಸಿಕ 250ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿಯವರು, ಎನ್ ಸಿಪಿ(ಶರದ್ ಪವಾರ್) ಹಾಗೂ ಬಿಜು ಜನತಾ ದಳದ(ನವೀನ್ ಪಟ್ನಾಯಕ್) ಮುಖಂಡರು ಯಾವತ್ತೂ ಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿಲ್ಲ. ತಮ್ಮ ಅಹವಾಲಿನ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ್ದರು.
ಸಂಸತ್ ನಲ್ಲಿ ಯಾವುದೇ ಕೋಲಾಹಲ ನಡೆಸದೇ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಕೂಡಾ ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಮೋದಿ ಇತರೆ ಸಂಸದರಿಗೆ ಸಲಹೆ ನೀಡಿದ್ದರು.
ಇಂದು ನಾನು ಎನ್ ಸಿಪಿ, ಬಿಜೆಡಿ ಸೇರಿ ಎರಡೂ ಪಕ್ಷಗಳನ್ನು ಅಭಿನಂದಿಸುತ್ತೇನೆ. ಎರಡೂ ಪಕ್ಷಗಳೂ ಸಂಸತ್ತಿನ ನಡವಳಿಕೆ(ಶಿಷ್ಟಾಚಾರ)ಯನ್ನು ಸಮರ್ಪಕವಾಗಿ ಅನುಸರಿಸಿವೆ. ಅವರು ಯಾವತ್ತೂ ಸಂಸತ್ ನ ಬಾವಿ ಬಳಿ ತೆರಳಿ ಗದ್ದಲ ಎಬ್ಬಿಸಿಲ್ಲ ಎಂದು ಹೊಗಳಿದ್ದರು.