ಅಪಘಾತ ತಡೆಗಟ್ಟಲು ದುಬಾರಿ ದಂಡ ಅಗತ್ಯ: ನಿತಿನ್ ಗಡ್ಕರಿ ಸಮರ್ಥನೆ

ಹೊಸ ಮೋಟಾರು ವಾಹನ ಕಾಯ್ದೆಯಡಿ  ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದನ್ನು  ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸಮರ್ಥಿಸಿಕೊಂಡಿದ್ದಾರೆ.  
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Updated on

ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆಯಡಿ  ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದನ್ನು  ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸಮರ್ಥಿಸಿಕೊಂಡಿದ್ದಾರೆ.  

ಜನರ ಮೇಲೆ ದುಬಾರಿ ದಂಡ ವಿಧಿಸುವುದು ಸರ್ಕಾರದ ಉದ್ದೇಶವಲ್ಲಾ, ಅಪಘಾತದಿಂದ ಆಗುತ್ತಿದ್ದ ಜನರ ಪ್ರಾಣ ಕಾಪಾಡಿ ರಸ್ತೆ ಸಂಚಾರದಲ್ಲಿ ಶಿಸ್ತು ತರುವುದು ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.

ಭಾನುವಾರದಿಂದ ನೂತನ ಸಂಚಾರಿ ನಿಯಮ ಜಾರಿಗೆ ಬಂದ ನಂತರ ಸಂಚಾರಿ ನಿಯಮ ಉಲ್ಲಂಘನೆಗಾಗಿ ಗುರುಗ್ರಾಮ್ ನಲ್ಲಿ ಬೈಕ್ ಸವಾರನೊಬ್ಬನಿಗೆ 23 ಸಾವಿರ ದಂಡ ವಿಧಿಸಲಾಗಿದೆ. ಟ್ರಕ್ ಡ್ರೈವರ್ ಗೆ 59 ಸಾವಿರದ ಚಲನ್ ನೀಡಲಾಗಿದೆ. 

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, ಸರ್ಕಾರ ಸುಖಾಸುಮ್ಮನೆ ಜನರ ಮೇಲೆ ದಂಡ ಹಾಕುವುದಿಲ್ಲ. ಯಾರೊಬ್ಬರು ಅಂತಹ ದಂಡ ಪಾವತಿಸದಂತಹ ದಿನ ಬರಬೇಕಾಗಿದೆ ಎಂದರು. 

ಕುಡಿದು ವಾಹನ ಚಾಲನೆ ಮಾಡುವ ಆಟೋ ಡ್ರೈವರ್ ಉಲ್ಲೇಖಿಸಿ ಮಾತನಾಡಿದ ನಿತಿನ್ ಗಡ್ಕರಿ, ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರಿ ಹೊರುತ್ತಾರೆ ಎಂದು ಪ್ರಶ್ನಿಸಿದರು.  

ನೂತನ ಕಾಯ್ದೆ ಅನುಷ್ಠಾನಕ್ಕೆ ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ರಾಜ್ಯಗಳು ನಿರಾಕರಿಸಿವೆ. ಈ ವಿಚಾರ ಸಮವರ್ತಿ ಪಟ್ಟಿಯಲ್ಲಿ ಬರಲಿದ್ದು, ಏಳು ರಾಜಕೀಯ ಪಕ್ಷಗಳ ರಾಜ್ಯ ಸಾರಿಗೆ ಸಚಿವರನ್ನೊಳಗೊಂಡ ಸಮಿತಿಯ ಶಿಫಾರಸ್ಸಿನ ನಂತರ ನೂತನ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಸಂಸತ್ತಿನ ಸ್ಥಾಯಿ ಸಮಿತಿಯೂ ಕೂಡಾ ಸಲಹೆಗಳನ್ನು ನೀಡಿದ್ದು, ನಂತರವಷ್ಟೇ ನೂತನ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

ದೇಶದಲ್ಲಿ  ಪ್ರತಿವರ್ಷ  5 ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇವರ ಜೀವವನ್ನು ಕಾಪಾಡಲಿಲ್ಲವೆಂದರೆ ದೇಶದ ಕಾನೂನಿಗೆ ಗೌರವ ಕೊಟ್ಟಂತೆ ಆಗುವುದಿಲ್ಲ ಅಂತೆಯೇ ಭಯ ಕೂಡಾ ಇರುವುದಿಲ್ಲ ಇದಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆಗಾಗಿ ಕಠಿಣ ದಂಡವನ್ನು ವಿಧಿಸುವುದು ಅಗತ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡರು

ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ನೂತನ ಮೋಟಾರು ವಾಹಗಳ ತಿದ್ದುಪಡಿ ಕಾಯ್ದೆ 2019ರಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ಸೇರಿದಂತೆ 63 ನಿಬಂಧನೆಗಳನ್ನು ಸರ್ಕಾರ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com