ಸಣ್ಣ ಪ್ರಮಾಣದಲ್ಲಿ ಕೊರೋನಾ ಲಕ್ಷಣ ಹೊಂದಿದ್ದರೆ ಮನೆಯಲ್ಲಿಯೇ ಸ್ವ ನಿರ್ಬಂಧಕ್ಕೆ ಅವಕಾಶ: ಹೊಸ ಮಾರ್ಗಸೂಚಿ

ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಸೋಂಕಿನ ಸಣ್ಣ ಮತ್ತು ಪೂರ್ವ ಲಕ್ಷಣಗಳು ಕಂಡುಬಂದರೆ ಅಂಥವರು ಸಹ ಮನೆಯಲ್ಲಿ ಸ್ವ ನಿರ್ಬಂಧದಲ್ಲಿ ಇರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಸೋಂಕಿನ ಸಣ್ಣ ಮತ್ತು ಪೂರ್ವ ಲಕ್ಷಣಗಳು ಕಂಡುಬಂದರೆ ಅಂಥವರು ಸಹ ಮನೆಯಲ್ಲಿ ಸ್ವ ನಿರ್ಬಂಧದಲ್ಲಿ ಇರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ. ಇಂತಹ ನಾಗರಿಕರು ಮನೆಯಲ್ಲಿಯೇ ಇದ್ದು ಜಿಲ್ಲಾ ಕಣ್ಗಾವಲು ಅಧಿಕಾರಿಗಳು, ಆಸ್ಪತ್ರೆಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಕೋವಿಡ್-19ಗೆ ಸಂಬಂಧಪಟ್ಟ ಪತ್ರಕ್ಕೆ ಸಹಿ ಹಾಕಬೇಕೆಂದು ಹೇಳಿದೆ.

ಕೊರೋನಾ ಶಂಕಿತ ಮತ್ತು ದೃಢಪಟ್ಟ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಳೆದ ಏಪ್ರಿಲ್ 7ರಂದು ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗೆ ಹೆಚ್ಚುವರಿಯಾಗಿ ಆರೋಗ್ಯ ಸಚಿವಾಲಯ ಈ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೊರೋನಾ ಪರೀಕ್ಷೆ ಮಾಡಿಸಿಕೊಂಡು ವರದಿಗಾಗಿ ಕಾಯುತ್ತಿರುವವರು, ದೃಢಪಟ್ಟ ಪ್ರಕರಣಗಳ ಜನರನ್ನು ಪ್ರಸ್ತುತ ಬೇರೆ ಸಾಮಾನ್ಯ ಜನರೊಂದಿಗೆ ಬೆರೆಯದಂತೆ ಅಥವಾ ಸಂಪರ್ಕಿಸದಂತೆ ಪ್ರತ್ಯೇಕವಾಗಿರಿಸಲಾಗುತ್ತದೆ. ಕೊರೋನಾ ಕಾಣಿಸಿಕೊಂಡರೆ ಬೇರೆಯವರಿಗೆ ಹರಡಬಾರದೆಂದು ಮುನ್ನೆಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಸ್ತುತ ಇರುವ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕಂಟೈನ್ ಮೆಂಟ್ ಹಂತದಲ್ಲಿ ಸಣ್ಣ, ಸಾಧಾರಣ, ಗಂಭೀರ ಹಂತಗಳಲ್ಲಿ ಕೊರೋನಾ ಸೋಂಕಿನ ಶಂಕೆಯಿದ್ದರೆ ಅಂತವರನ್ನು ಕ್ರಮವಾಗಿ ಕೋವಿಡ್ ಕೇರ್ ಸೆಂಟರ್, ನಿರ್ದಿಷ್ಟ ಕೋವಿಡ್ ಆರೋಗ್ಯ ಕೇಂದ್ರ, ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಿ ನಿರ್ಬಂಧದಲ್ಲಿಡಲಾಗುತ್ತದೆ.

ಅದಾಗಿಯೂ, ಸ್ವ ನಿರ್ಬಂಧನೆಗೆ ತಮ್ಮ ನಿವಾಸಗಳಲ್ಲಿ ಅಗತ್ಯವಾದ ಸೌಲಭ್ಯವನ್ನು ಹೊಂದಿರುವ ಅತ್ಯಂತ ಕಡಿಮೆ ಅಥವಾ ಪೂರ್ವ ಕೊರೋನಾ ಸೋಂಕಿತ ಲಕ್ಷಣ ಹೊಂದಿರುವವರು ತಮ್ಮ ಮನೆಗಳಲ್ಲಿಯೇ ಸ್ವ ನಿರ್ಬಂಧದಲ್ಲಿರುವ ಆಯ್ಕೆಯನ್ನು ಪಡೆದುಕೊಳ್ಳಬಹುದು.

ಹೀಗೆ ಮನೆಯಲ್ಲಿ ಪ್ರತ್ಯೇಕವಾಗಿ ಸ್ವ ನಿರ್ಬಂಧನದಲ್ಲಿ ಇರಲು ಚಿಕಿತ್ಸಕ ವೈದ್ಯಕೀಯ ಅಧಿಕಾರಿಯಿಂದ ಒಪ್ಪಿಗೆ ಪಡೆದಿರಬೇಕು.ಮನೆಯಲ್ಲಿ ಪ್ರತ್ಯೇಕವಾಗಿರಲು, ಉಳಿದ ಕುಟುಂಬ ಸದಸ್ಯರ ಸಂಪರ್ಕದಿಂದ ದೂರವಿರುವ ಸೌಲಭ್ಯ ಮನೆಯಲ್ಲಿರಬೇಕು. ಇಂತವರನ್ನು ನೋಡಿಕೊಳ್ಳುವವರು ದಿನಪೂರ್ತಿ, ವಾರಪೂರ್ತಿ ವೈದ್ಯರಿಗೆ ಮಾಹಿತಿ ಪಡೆದುಕೊಳ್ಳಲು ಸಿಗುವಂತಿರಬೇಕು. ಮನೆಯಲ್ಲಿ ಸ್ವ ನಿರ್ಬಂಧನದಲ್ಲಿ ಇರುವಾಗ ಅವರನ್ನು ನೋಡಿಕೊಳ್ಳುವವರು ಮತ್ತು ಆಸ್ಪತ್ರೆಯ ವೈದ್ಯರ ಮಧ್ಯೆ ನಿರಂತರ ಸಂಪರ್ಕ ಹೊಂದಿರಬೇಕು. ವೈದ್ಯರು ಹೇಳಿದಂತೆ ಮನೆಯಲ್ಲಿದ್ದುಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುತ್ತಿರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com