
ನವದೆಹಲಿ: ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೊಸ ಸೋಂಕಿತರು ಮತ್ತು ಸಾವಿನ ಪ್ರಮಾಣ ದಾಖಲಾಗುತ್ತಿರುವ ನಡುವೆಯೂ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.50ರ ಗಡಿ ದಾಡಿದೆ.
ಈ ವರೆಗೆ ದೇಶದಲ್ಲಿ 3,25,136 ಸೋಂಕಿತರು ಪತ್ತೆಯಾಗಿದ್ದರೆ, 1,68,771 ಜನರು ಸಂಪೂರ್ಣವಾಗಿ ಚೇತರಿಸಿಕೊಂಡು ಆರೋಗ್ಯವಂತರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಪ್ರಮಾಣ ಶೇ.51.90ಕ್ಕೆ ತಲುಪಿದೆ.
ನಿನ್ನೆಯಷ್ಟೇ ದೇಶದಲ್ಲಿ ಒಂದೇ ದಿನ 11 ಸಾವಿರಕ್ಕೆ ಹೆಚ್ಚು ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 3.25 ಲಕ್ಷ ದಾಟಿದೆ. ಇದರಲ್ಲಿ ಮಹಾರಾಷ್ಟ್ರ ರಾಜ್ಯದ ಪಾಲೇ ಹೆಚ್ಚಾಗಿದ್ದು, ಒಂದೇ ದಿನ ಆ ರಾಜ್ಯದಲ್ಲಿ 3390 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,07,958ಕ್ಕೆ ಮುಟ್ಟಿದೆ.
ದೆಹಲಿಯಲ್ಲಿ 2224, ತಮಿಳುನಾಡಿನಲ್ಲಿ 1947, ಗುಜರಾತ್ ನಲ್ಲಿ 511, ಪಶ್ಚಿಮ ಬಂಗಾಳ ರಾಜ್ಯದಲ್ಲಿ 389 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
Advertisement