

ನವದೆಹಲಿ: ಗಲ್ವಾನ್ ಕಣಿವೆ ಯಾವತ್ತಿಗೂ ತನಗೆ ಸೇರಿದ್ದು ಎಂಬ ಚೀನಾ ಪ್ರತಿಪಾದನೆಯನ್ನು ಭಾರತ ತಳ್ಳಿಹಾಕಿದೆ. ಚೀನಾದ ಮಾತನ್ನು ಯಾವತ್ತಿಗೂ ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾರತ ಖಡಾಖಂಡಿತವಾಗಿ ಹೇಳಿದೆ.
ಲಡಾಕ್ ಗಡಿಭಾಗದಲ್ಲಿ ಕಳೆದ ಸೋಮವಾರ ರಾತ್ರಿ ಎರಡೂ ಕಡೆಯ ಸೈನಿಕರು ಪ್ರಾಣತೆತ್ತ ನಂತರ ಹೇಳಿಕೆ ಹೊರಡಿಸಿದ್ದ ಚೀನಾ ವಿದೇಶಾಂಗ ಸಚಿವಾಲಯ, ಭಾರತ ಸೇನಾ ಯೋಧರು ಗಡಿ ಉಲ್ಲಂಘಿಸಿ ಬಂದು ನಮ್ಮ ಸೈನಿಕರನ್ನು ಪ್ರಚೋದಿಸಿದರೆ ನಾವು ಸುಮ್ಮನಿರುವುದಿಲ್ಲ, ಗಲ್ವಾನ್ ಕಣಿವೆ ಯಾವತ್ತಿದ್ದರೂ ಚೀನಾಕ್ಕೆ ಸೇರಿದ್ದು, ಎಂದು ಹೇಳಿಕೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, ಈ ಸೂಕ್ಷ್ಮ ವಿಚಾರವನ್ನು ಎರಡೂ ದೇಶಗಳು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿದೆ. ಕಳೆದ ಜೂನ್ 6ರಂದು ಹಿರಿಯ ಕಮಾಂಡರ್ ಮಟ್ಟದಲ್ಲಿ ನಡೆದ ಮಾತುಕತೆ ವೇಳೆ ತೆಗೆದುಕೊಂಡ ನಿರ್ಧಾರಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕಿದೆ. ಉತ್ಪ್ರೇಕ್ಷಿತ ಮತ್ತು ಒಪ್ಪಲಾಗದ ಹಕ್ಕುಗಳನ್ನು ಚೀನಾ ಮಾಡಿದರೆ ಅದನ್ನು ಖಂಡಿತವಾಗಿಯೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ನಿನ್ನೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವರು ಪರಸ್ಪರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದರ ನಂತರ ಅನುರಾಗ್ ಶ್ರೀವಾಸ್ತವ್ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಟ್ಟಂತೆ ಕಂಡುಬರುತ್ತಿದ್ದು, 45 ವರ್ಷಗಳ ಗಡಿ ಸಮಸ್ಯೆಗೆ ನಿನ್ನೆ ನಡೆದ ಘರ್ಷಣೆ ತುಪ್ಪ ಸುರಿದಂತಾಗಿದೆ.