

ನವದೆಹಲಿ: ಮಹಾಮಾರಿ ಕೊರೋನಾ ಪತ್ತೆಗಾಗಿ ದೇಶದಲ್ಲಿ ಒಂದೇ ದಿನ ದಾಖಲೆಯ 20.61 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇನ್ನು ಪರೀಕ್ಷೆ ವೇಳೆ ಪಾಸಿಟಿವ್ ಪ್ರಮಾಣವು ಶೇಕಡಾ 12.59ಕ್ಕೆ ಕುಸಿದಿದೆ. ಇನ್ನು ಸತತ ಎಂಟನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಚೇತರಿಕೆ ಪ್ರಮಾಣ ಮೀರಿಸುತ್ತಲೇ ಇದ್ದು, ಇಂದು 3,57,295 ರೋಗಿಗಳು ಆಸ್ಪತ್ರೆಗಳಿಂದ ಡಿಸ್ಜಾರ್ಜ್ ಆಗಿದ್ದು ಚೇತರಿಕೆ ಸಂಖ್ಯೆ 2,27,12,735ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಪ್ರಕಾರ, ಮೇ 20ರವರೆಗೆ 32,44,17,870 ಕೊರೋನಾ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇನ್ನು ನಿನ್ನೆ ಒಂದೇ ದಿನ 20,61,683 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದಲ್ಲದೆ, ಭಾರತದಲ್ಲಿ ಸತತ ಐದು ದಿನವೂ 3 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಾಗಿದೆ.
ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಅಸ್ಸಾಂ ಟಾಪ್ 10 ರಾಜ್ಯಗಳು ಸೇರಿದಂತೆ 76 ರಾಜ್ಯಗಳಲ್ಲಿ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು 2,59,551 ಹೊಸ ಪ್ರಕರಣಗಳಲ್ಲಿ ದಾಖಲಾಗಿವೆ ಸಚಿವಾಲಯ ತಿಳಿಸಿದೆ.
ತಮಿಳುನಾಡಿನಲ್ಲಿ ದೈನಂದಿನ ಅತಿ ಹೆಚ್ಚು ಹೊಸ ಪ್ರಕರಣಗಳು 35,579 ಪತ್ತೆಯಾಗಿದ್ದರೆ, ಕೇರಳದಲ್ಲಿ 30,491 ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ, ಭಾರತದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 30,27,925ಕ್ಕೆ ಇಳಿದಿದೆ. ಕಳೆದ ಒಂದು ದಿನದಲ್ಲಿ ಒಟ್ಟು ಸಕ್ರಿಯ ಪ್ರಕರಣದಲ್ಲಿ 1,01,953 ಪ್ರಕರಣಗಳು ಕಡಿಮೆಯಾಗಿವೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಸೇರಿ ಎಂಟು ರಾಜ್ಯಗಳಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 69.47 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ, ದೇಶದಲ್ಲಿ ನೀಡಲಾಗುತ್ತಿರುವ ಲಸಿಕೆ ಪ್ರಮಾಣ 19 ಕೋಟಿ ಮೀರಿದೆ. ತಾತ್ಕಾಲಿಕ ವರದಿಯ ಪ್ರಕಾರ ಶುಕ್ರವಾರ ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 19,18,79,503 ಡೋಸ್ ನೀಡಲಾಗಿದೆ.