ಟೀ ಶಾಪ್ ಮುಂದೆ ಹುಡುಗಿ ಬೇಕಾಗಿದ್ದಾಳೆ ಎಂದು ಬ್ಯಾನರ್ ಹಾಕಿದ ವರ: ದೇಶ ವಿದೇಶಗಳಿಂದ ಹುಡುಗಿಯರ ಕರೆ

ವಧು ಅನ್ವೇಷಣೆಗಾಗಿ ಬ್ರೋಕರ್ ಮೊರೆ ಹೋಗುವುದನ್ನು ನೋಡಿರುತ್ತೀರಿ, ಮ್ಯಾಟ್ರಿಮೋನಿಯಲ್ ವೆಬ್ ಸೈಟುಗಳಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ನೋಡಿರುತ್ತೀರಿ. ಇಲ್ಲೊಬ್ಬ ಭೂಪ ಹುಡುಗಿ ಬೇಕಾಗಿದ್ದಾಳೆ ಎಂದು ತನ್ನ ಅಂಗಡಿ ಮುಂದೆ ಬ್ಯಾನರ್ ಹಾಕಿಕೊಂಡಿದ್ದಾನೆ. ಅವನ ಅದೃಷ್ಟಕ್ಕೆ ವಿದೇಶಗಳಿಂದ ಕರೆ ಬರುತ್ತಿದೆ. 
ಟೀ ಶಾಪ್ ಬ್ಯಾನರ್ ಮುಂದೆ ಉನ್ನಿ
ಟೀ ಶಾಪ್ ಬ್ಯಾನರ್ ಮುಂದೆ ಉನ್ನಿ
Updated on

ತ್ರಿಶ್ಯೂರ್: ಕೇರಳದ ವಲ್ಲಚಿರ ಪಟ್ಟಣದ ನಿವಾಸಿ ಉನ್ನಿಕೃಷ್ಣನ್ ಟೀ ಶಾಪ್ ನಡೆಸುತ್ತಿದ್ದಾನೆ. 33 ವರ್ಷದ ಆತ ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುತ್ತಿದ್ದಾನೆ. ಅದಕ್ಕಾಗಿ ಆತ ಹಿಡಿದ ಮಾರ್ಗ ಮಾತ್ರ ವಿನೂತನವಾದುದು. 

ಬ್ರೋಕರ್, ಮ್ಯಾಟ್ರಿಮೋನಿಯಲ್ ಜಾಲತಾಣಗಳ ಗೊಡವೆಯೇ ಬೇಡವೆಂದು ಆತ ತನ್ನ ಅಂಗಡಿ ಮುಂದೆಯೇ ಹುಡುಗಿ ಬೇಕಾಗಿದ್ದಾಳೆ ಎಂದು ಪುಟ್ಟ ಬ್ಯಾನರ್ ಹಾಕಿಕೊಂಡಿದ್ದಾನೆ. ಯಾವ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂದು ಬೇರೆ ಉದಾರತೆ ಮೆರೆದಿದ್ದಾನೆ.

ಉನ್ನಿಕೃಷ್ಣನ್ ನ ಜಾಹೀರಾತು ಇದೀಗ ವೈರಲ್ ಆಗಿದ್ದು, ವಿದೇಶಗಳಿಂದ ಕರೆ ಬರುತ್ತಿವೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನಿಂದ ಹುಡುಗಿಯರು ಕರೆ ಮಾಡಿದ್ದಾರೆ ಎಂದು ನಾಚುತ್ತಾ ಉನ್ನಿಕೃಷ್ಣನ್ ಹೇಳುತ್ತಾರೆ. 

ಆತ ಇತ್ತೀಚಿಗಷ್ಟೆ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಲಾಟರಿ ಅಂಗಡಿ ನಡೆಸುತ್ತಿದ್ದ ಆತ ಈಗ ಟೀ ಅಂಗಡಿ ಇಟ್ಟುಕೊಂಡಿದ್ದು, ಬಿಜಿನೆಸ್ ಚೆನ್ನಾಗಿ ಆಗುತ್ತಿದೆ ಎನ್ನುತ್ತಾರೆ. ಸದ್ಯ ಆತನ ಬದುಕಿಗೆ ಬೇಕಾಗಿರುವುದು ಒಳ್ಳೆ ಹೆಂಡತಿ. 

ಉನ್ನಿಕೃಷ್ಣನ್ ಮನೆಯವರು ಈ ಹಿಂದೆ ಬ್ರೋಕರ್ ಮೊರೆ ಹೋಗಿ ಜಾತಕ ನೋಡಿಸಿ ಹುಡುಗಿ ಹುಡುಕುವ ಪ್ರಯತ್ನ ನಡೆಸಿದ್ದರಂತೆ ಆದರೆ ಯಾವುದೇ ಹುಡುಗಿಯ ಜಾತಕ ಹೊಂದಲಿಲ್ಲವಂತೆ. ಹೀಗಾಗಿ ಆ ಮಾರ್ಗವನ್ನೇ ತ್ಯಜಿಸಿ ಜಾತಕದ ಉಸಾಬರಿಯೇ ಬೇಡವೆಂದು ಬ್ಯಾನರ್ ತಗುಲಿ ಹಾಕಿದ್ದರು. 

ಸ್ನೇಹಿತರೊಬ್ಬರು ಉನ್ನಿಯ ಬ್ಯಾನರ್ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ದೂರದೂರಿನ ಮಲಯಾಳಿಗಳು ಮದುವೆ ವಿಚಾರವಾಗಿ ಕರೆ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com