

ಥಾಣೆ: ಹವಾನಿಯಂತ್ರಕ (ಎಸಿ) ಮೆಕ್ಯಾನಿಕ್ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ವಸತಿ ಕಟ್ಟಡದ ಲಿಫ್ಟ್‌ನಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಆತನನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ತಲೋಜಾದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
19 ವರ್ಷದ ಆರೋಪಿ ಕಟ್ಟಡದ ಕೆಲವು ಎಸಿ ದುರಸ್ತಿ ಕಾರ್ಯದ ನಂತರ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಕಂಡಿದ್ದಾನೆ. ಅಲ್ಲಿಂದ ಹೊರಡುವ ಮುನ್ನ ಬಾಲಕಿಯನ್ನು ಲಿಫ್ಟ್‌ನೊಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಲೋಜಾ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಿತೇಂದ್ರ ಸೋನಾವಾನೆ ತಿಳಿಸಿದ್ದಾರೆ.
ಸಂತ್ರಸ್ತೆ ತಕ್ಷಣ ಮೂರನೇ ಮಹಡಿಯಲ್ಲಿರುವ ಮನೆಗೆ ತೆರಳಿ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಬಗ್ಗೆ ತಾಯಿ ವಿಚಾರಿಸಿದಾಗ, ಮಗು ನಡೆದ ಘಟನೆಯ ಬಗ್ಗೆ ತಿಳಿಸಿದೆ. ಬಳಿಕ ಕೆಳಕ್ಕೆ ಧಾವಿಸಿದ ತಾಯಿ ಆರೋಪಿಯನ್ನು ಕಂಡಿದ್ದಾರೆ.
ಬಳಿಕ ಕಟ್ಟಡದ ಭದ್ರತಾ ಸಿಬ್ಬಂದಿ ಮತ್ತು ಇತರ ನಿವಾಸಿಗಳು ಆರೋಪಿಯನ್ನು ಹಿಡಿದು, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆತನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ, ಸ್ಥಳೀಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಸೋನಾವಾನೆ ಹೇಳಿದರು.