ಜಾರ್ಖಂಡ್: ತಾಯಿಯ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಐವರಿಂದ ಅತ್ಯಾಚಾರ, ಇಬ್ಬರ ಬಂಧನ
ದಿಯೋಘರ್: ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಎದುರೇ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಈ ಸಂಬಂಧ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಬಂಧನಕ್ಕಾಗಿ ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ದುಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ ರೌತ್ ಅವರು ತಿಳಿಸಿದ್ದಾರೆ.
ಬಾಲಕಿಯ ತಾಯಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ಎರಡು ದ್ವಿಚಕ್ರವಾಹನಗಳಲ್ಲಿ ಬಂದ ಐವರು, ಅವರಿಬ್ಬರನ್ನು ದಾರಿ ತಪ್ಪಿಸಿದರು ಮತ್ತು ಬಾಲಕಿಯನ್ನು ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ತಾಯಿ ತಡೆಯಲು ಮುಂದಾದಾಗ ಆಕೆಯನ್ನು ಥಳಿಸಿ ನಂತರ ಆಕೆಯ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ನಿರೀಕ್ಷಿಸಲಾಗಿದೆ ಎಂದು ದಿಯೋಘರ್ ಪೊಲೀಸ್ ಅಧೀಕ್ಷಕ(ಎಸ್‌ಪಿ) ಸುಭಾಷ್ ಚಂದ್ರ ಜಾಟ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ