

ಭೂಪಾಲ್: ಮಧ್ಯಪ್ರದೇಶ ಸಚಿವ ಮತ್ತು ಬಿಜೆಪಿ ಮುಖಂಡ ವಿಶ್ವಾಸ್ ಸಾರಂಗ್ ಶುಕ್ರವಾರ ವಿಶೇಷ ಚೇತನ ಕಲಾವಿದ 'ಕಾಮೋ ಅವರೊಂದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಹೋಲಿಸಿದ್ದಾರೆ. ದಿವ್ಯಾಂಗ ಕಲಾವಿದರನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಶಸ್ಸಿನಿಂದ ಕೇಸರಿ ಪಕ್ಷ ನಲುಗಿದೆ ಎಂದು ಹೇಳಿದೆ.
ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಾರಂಗ್, `ಕಾಮ' ಎಂದೂ ಕರೆಯಲ್ಪಡುವ ಕಾಮೋ ತನ್ನದೇ ಆದ ವಿಶಿಷ್ಟ ನೃತ್ಯದಿಂದ ಗುಜರಾತ್ ನಲ್ಲಿ ಪ್ರಸಿದ್ಧನಾಗಿದ್ದಾನೆ. ಆಗಾಗ್ಗೆ ಜಾನಪದ ಗಾಯಕರ ನೇರ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವಂತೆ ತೋರುತ್ತಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಾರಂಗ್ ರಾಹುಲ್ ಗಾಂಧಿಯನ್ನು ಕಾಮೋಗೆ ಹೋಲಿಸಿ ಅಪಹಾಸ್ಯ ಮಾಡಿರುವುದು ಕೇಳಿ ಬಂದಿದೆ. ಭಾರತ್ ಜೋಡೋ ಯಾತ್ರೆಯಿಂದ ಕಾಮೋ ಪ್ರಯಾಣಿ ಆರಂಭಿಸಿರುವುದನ್ನು ನೀವು ನೋಡಬಹುದು, ಅವರು ಗರೀಬಿ ಹಟಾವೋ ಬಗ್ಗೆ ಮಾತನಾಡುತ್ತಾರೆ ಆದರೆ 40,000 ರೂಪಾಯಿ ಬೆಲೆಯ ಟೀ ಶರ್ಟ್ ಧರಿಸುತ್ತಾರೆ ಎಂದು ಸಾರಂಗ್ ಹೇಳಿದ್ದಾರೆ.
ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ, ಕಾಮ ಒಬ್ಬ ದಿವ್ಯಾಂಗ (ವಿಶೇಷ ಸಾಮರ್ಥ್ಯವುಳ್ಳ) ಕಲಾವಿದ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಲಕ್ಷಾಂತರ ಜನರು ಸೇರುವುದನ್ನು ನೋಡಿ ಬಿಜೆಪಿ ನಾಯಕರು ಗಲಿಬಿಲಿಗೊಂಡಿದ್ದಾರೆ ಮತ್ತು ಅವರ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.