

ಹೈದರಾಬಾದ್: ಮೂರು ದಿನಗಳ ವಿರಾಮದ ನಂತರ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 27 ರಂದು ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಲ್‌ನಿಂದ ಪುನರಾರಂಭಗೊಳ್ಳಲಿದೆ ಎಂದು ಪಕ್ಷದ ಮೂಲಗಳು ಬುಧವಾರ ತಿಳಿಸಿವೆ.
ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 23 ರಂದು ಬೆಳಿಗ್ಗೆ ರಾಯಚೂರಿನಿಂದ ಕರ್ನಾಟಕದಿಂದ ನಿರ್ಗಮಿಸಿದ ನಂತರ ಗುಡೆಬೆಳ್ಳೂರು ಮೂಲಕ ತೆಲಂಗಾಣ ರಾಜ್ಯವನ್ನು ಪ್ರವೇಶಿಸಿತ್ತು.
ಇಂದು ಸಂಜೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಟಿಪಿಸಿಸಿ ಮೂಲಗಳು ತಿಳಿಸಿವೆ.
ಬಳಿಕ ಅಕ್ಟೋಬರ್ 27ರಂದು ಬೆಳಗ್ಗೆ 6.30ಕ್ಕೆ ಮಕ್ತಲ್‌ನ 11/22 ಕೆವಿ ಸಬ್‌ಸ್ಟೇಷನ್‌ನಿಂದ ಮೂರು ಕಿಮೀ ಕ್ರಮಿಸಿದ ನಂತರ ಅವರು ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದು ತೆಲಂಗಾಣದಲ್ಲಿ 16 ದಿನಗಳ ಕಾಲ ಮುಂದುವರಿಯಲಿದ್ದು, 19 ವಿಧಾನಸಭೆ ಮತ್ತು ಏಳು ಸಂಸದೀಯ ಕ್ಷೇತ್ರಗಳನ್ನೊಳಗೊಂಡ 375 ಕಿ.ಮೀ ದೂರದವರೆಗೆ ಸಾಗಿ ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.
ಗಾಂಧಿ ಅವರು ಪ್ರತಿದಿನ 20-25 ಕಿಮೀ 'ಪಾದಯಾತ್ರೆ' ಕೈಗೊಳ್ಳಲಿದ್ದಾರೆ ಮತ್ತು ಪಾದಯಾತ್ರೆಯಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬುದ್ಧಿಜೀವಿಗಳು, ವಿವಿಧ ಸಮುದಾಯಗಳ ಮುಖಂಡರು, ರಾಜಕಾರಣಿಗಳು, ಕ್ರೀಡೆ, ಉದ್ಯಮ ಮತ್ತು ಚಿತ್ರರಂಗದ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.
ತೆಲಂಗಾಣದ ಕೆಲವು ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲಿದ್ದು, ಅಂತರ ಧರ್ಮೀಯ ಪ್ರಾರ್ಥನೆಯನ್ನೂ ಸಲ್ಲಿಸಲಾಗುವುದು ಎಂದು ಟಿಪಿಸಿಸಿ ತಿಳಿಸಿದೆ.
ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಯಾತ್ರೆಯು ತೆಲಂಗಾಣಕ್ಕೆ ಪ್ರವೇಶಿಸುವ ಮುನ್ನ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಯಾತ್ರೆ ಪೂರ್ಣಗೊಂಡಿದೆ.