

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರು 11 ತಿಂಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಗುಂಪು ನಡೆಸಿದ ಬೆನ್ನಿಗೆ ಚೂರಿ ಹಾಕುವ ಕೃತ್ಯಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುರುವಾರ ಎಚ್ಚರಿಸಿದ್ದಾರೆ.
ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನಾದ ‘ಭಾರತೀಯ ಕಾಮ್ಗಾರ್ ಸೇನಾ’ದ 55ನೇ ಸಂಸ್ಥಾಪನಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಠಾಕ್ರೆ, 'ಪ್ರತಿಯೊಬ್ಬರಿಗೂ ಅವರವರ ದಿನಗಳಿವೆ ಆದರೆ ನಮ್ಮ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ' ಎಂದು ಹೇಳಿದರು.
'ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ನಾನು ಖಂಡಿತವಾಗಿಯೂ ಅವರಿಗೆ ಅದನ್ನು ಹಿಂತಿರುಗಿಸುತ್ತೇನೆ. ನಾವು ಅವರಿಗೆ ನೀಡುವ 'ಪ್ರಸಾದ'ವನ್ನು ಅವರು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ' ಎಂದು ಹೇಳಿದರು.
ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವೇದನೆಯನ್ನೇ ಹೊಂದಿಲ್ಲ. ಅವರು ಕೇವಲ ಕೈಗಾರಿಕೋದ್ಯಮಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಮತ್ತು ಕಾರ್ಮಿಕರು ಅಥವಾ ರೈತರ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
ಮೆಗಾ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ ಆಡಳಿತಾರೂಢ ಶಿವಸೇನೆ ಸಚಿವ ಉದಯ್ ಸಾಮಂತ್‌ಗೆ ತಿರುಗೇಟು ನೀಡಿದ ಠಾಕ್ರೆ, ಇದಕ್ಕೆ ವಿರುದ್ಧವಾಗಿ, ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ತಾವು ಸಿಎಂ ಆಗಿದ್ದಾಗ, ರಾಜ್ಯವು 2.5 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ಪಡೆದುಕೊಂಡಿತು ಮತ್ತು ಅದರ ಕೈಗಾರಿಕಾ ನೀತಿಗಳು ಇಲ್ಲಿ 25 ದೊಡ್ಡ ಕೈಗಾರಿಕೆಗಳನ್ನು ಆಕರ್ಷಿಸಿದವು ಎಂದರು.
ಆದಾಗ್ಯೂ, ಈ ಸರ್ಕಾರವು ವೇದಾಂತ-ಫಾಕ್ಸ್‌ಕಾನ್, ಟಾಟಾ-ಏರ್‌ಬಸ್, ಬಲ್ಕ್ ಡ್ರಗ್ಸ್ ಪಾರ್ಕ್‌ನಂತಹ ಅನೇಕ ಕೈಗಾರಿಕೆಗಳನ್ನು ಇತರ ರಾಜ್ಯಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಈ ಆಡಳಿತವು ಅಂತರರಾಷ್ಟ್ರೀಯ ಪಾದರಕ್ಷೆಗಳ ಬ್ರಾಂಡ್ ಭಾರತಕ್ಕೆ ಬರುವ ಬಗ್ಗೆ ಮಾತನಾಡಿತ್ತು, ಆದರೆ ಈಗ ಅದು ತಮಿಳುನಾಡಿಗೆ ಹೋಗುತ್ತಿದೆ ಎಂದು ನನಗೆ ತಿಳಿದಿದೆ ಎಂದು ಹೇಳಿದರು.
ರಾಜ್ಯದಿಂದ ಹೊರಹೋದ ಯೋಜನೆಗಳು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿವೆ ಎಂದಿರುವ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದ ಠಾಕ್ರೆ, ಹಾಗಿದ್ದರೆ, ನೀವು ಅದನ್ನು ಜನರ ಮೇಲೆ ಏಕೆ ಹೇರುತ್ತಿದ್ದೀರಿ? ಎಂದ ಅವರು, ಬುಲೆಟ್ ರೈಲು, ಆರೆ ಕಾರ್ ಶೆಡ್, ರತ್ನಗಿರಿ ಪೆಟ್ರೋಕೆಮಿಕಲ್ಸ್ ಯೋಜನೆ ಇತ್ಯಾದಿಗಳಿಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಉಲ್ಲೇಖಿಸಿದರು.
ನಾನು ಅಧಿಕಾರದಲ್ಲಿ ಇದ್ದಿದ್ದರೆ, ಈ ಯೋಜನೆಗಳನ್ನು ಮುಂದುವರಿಸುವ ಮೊದಲು ಸ್ಥಳೀಯರ ಒಪ್ಪಿಗೆಯನ್ನು ಮೊದಲು ತೆಗೆದುಕೊಳ್ಳುತ್ತೇನೆ. ಅವರು ಮೊದಲು ಆಂದೋಲನ ನಡೆಸುತ್ತಿರುವ (ರತ್ನಗಿರಿ) ಗ್ರಾಮಸ್ಥರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಅವರು ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.