INDIA ಕೂಟದ ನಾಯಕರ ವಾಕ್ಸಮರ: 'ಹಿಂದಿ ಕಲಿತ ಬಿಹಾರ, ಉ.ಪ್ರದೇಶದವರು ಚೆನ್ನೈನಲ್ಲಿ ಟಾಯ್ಲೆಟ್ ತೊಳಿತಿದಾರೆ'- ದಯಾನಿಧಿ ಮಾರನ್

2024ರ ಲೋಕಸಭಾ ಚುನಾವಣೆಗಾಗಿ ಒಗ್ಗೂಡಿರುವ ವಿಪಕ್ಷಗಳ ಒಕ್ಕೂಟ INDIA ಮೈತ್ರಿಕೂಟದಲ್ಲಿ ನಾಯಕರ ಉತ್ತರ vs ದಕ್ಷಿಣ ವಾಕ್ಸಮರ ತಾರಕ್ಕೇರಿದ್ದು, ಹಿಂದಿ ಕಲಿಯಿರಿ ಎಂಬ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಹಿಂದಿ ಕಲಿಯಿರಿ ಹೇಳಿಕೆ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರ ಹೇಳಿಕೆ ವ್ಯಾಪಕ ವೈರಲ್ ಆಗಿದೆ.
ದಯಾನಿಧಿ ಮಾರನ್ (ಸಂಗ್ರಹ ಚಿತ್ರ)
ದಯಾನಿಧಿ ಮಾರನ್ (ಸಂಗ್ರಹ ಚಿತ್ರ)

ಚೆನ್ನೈ: 2024ರ ಲೋಕಸಭಾ ಚುನಾವಣೆಗಾಗಿ ಒಗ್ಗೂಡಿರುವ ವಿಪಕ್ಷಗಳ ಒಕ್ಕೂಟ INDIA ಮೈತ್ರಿಕೂಟದಲ್ಲಿ ನಾಯಕರ ಉತ್ತರ vs ದಕ್ಷಿಣ ವಾಕ್ಸಮರ ತಾರಕ್ಕೇರಿದ್ದು, ಹಿಂದಿ ಕಲಿಯಿರಿ ಎಂಬ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಹಿಂದಿ ಕಲಿಯಿರಿ ಹೇಳಿಕೆ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರ ಹೇಳಿಕೆ ವ್ಯಾಪಕ ವೈರಲ್ ಆಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ಕಟ್ಟಡ ಕಾರ್ಮಿಕರಾಗಿ, ಶೌಚಾಲಯಗಳ ಶುಚಿಗೊಳಿಸುವಂಥ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ ಎಂದು ಡಿಎಂಕೆ ಮುಖಂಡ ದಯಾನಿಧಿ ಮಾರನ್ (Dayanidhi Maran) ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ತುಣಕೊಂದು ವ್ಯಾಪಕ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ದಯಾನಿಧಿ ಮಾರನ್ ಹಿಂದಿ ಹೇರಿಕೆ ಕುರಿತು ಮಾತನಾಡುತ್ತಾ, ಬಿಹಾರ, ಉತ್ತರ ಪ್ರದೇಶದಿಂದ ಬರುವ ಮಂದಿ ತಮಿಳುನಾಡಿನಲ್ಲಿ ತಮಿಳು ಕಲಿತುಕೊಂಡು ಕಟ್ಟಡ ಕಾಮಗಾರಿ, ಕಸಗೂಡಿಸುವಿಕೆ ಮತ್ತು ಶೌಚಾಲಯ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದುವೇ ಹಿಂದಿ ಕಲಿತವರ ಕೆಲಸ ಎಂದು ವ್ಯಂಗ್ಯ ಮಾಡುತ್ತಾರೆ.

ವರದಿಗಳ ಪ್ರಕಾರ, ದಯಾನಿಧಿ ಮಾರನ್ ಅವರ ಹೇಳಿಕೆ ಭಾಷಾ ಕಲಿಕೆಯ ಕುರಿತ ಸಂದರ್ಭದ್ದಾಗಿದೆ. ಇಂಗ್ಲಿಷ್ ಕಲಿಯುವ ಮತ್ತು ಹಿಂದಿಯನ್ನು ಮಾತ್ರ ಕಲಿಯುವ ಜನರ ನಡುವಿನ ಹೋಲಿಕೆಯಾಗಿದೆ. ಇಂಗ್ಲಿಷ್ ಕಲಿಯುವವರು ಐಟಿಯಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯುತ್ತಾರೆ. ಹಿಂದಿಯನ್ನು ಮಾತ್ರ ಕಲಿಯುವವರು – ಉತ್ತರ ಪ್ರದೇಶ ಮತ್ತು ಬಿಹಾರದ ಜನರು- ರಸ್ತೆಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ಹಿಂದಿಯನ್ನು ಮಾತ್ರ ಕಲಿತಾಗ ಈ ರೀತಿ ಆಗುತ್ತದೆ ಎಂದು ಎಂದು ದಯಾನಿಧಿ ಹೇಳಿದ್ದರು.

ಉತ್ತರ-ದಕ್ಷಿಣದ ಕಿಚ್ಚು: ಬಿಜೆಪಿ ವಾಗ್ದಾಳಿ
ಬಿಹಾರ ಮತ್ತು ಉತ್ತರ ಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಯು, ಆರ್​ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಪ್ರತಿಪಕ್ಷಗಳ ಮೈತ್ರಿಕೂಟದ ಭಾಗವಾಗಿವೆ. (ಇಂಡಿಯಾ ಬ್ಲಾಕ್​) ಡಿಎಂಕೆ ಕೂಡ ಈ ಬಣದಲ್ಲಿದೆ. “ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಹಿಂದಿ ಮಾತನಾಡುವ ಜನರ ಬಗ್ಗೆ ತಮ್ಮ ಬಣದ ಪಾಲುದಾರರ ಅಭಿಪ್ರಾಯವನ್ನು ಒಪ್ಪುತ್ತಾರೆಯೇ? ಹಿಂದಿ ಮಾತನಾಡುವ ಜನರ ವಿರುದ್ಧ ಡಿಎಂಕೆ ಮತ್ತು ಇಂಡಿಯಾ ಬ್ಲಾಕ್ ಏಕೆ ಇಷ್ಟೊಂದು ದ್ವೇಷ ಹೊಂದಿವೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು” ಎಂದು ಬಿಹಾರ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಹಿಂದಿ ಕಲಿಯಿರಿ ಎಂದು ಹೇಳಿದ್ದ ನಿತೀಶ್ ಕುಮಾರ್
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿತೀಶ್ ಕುಮಾರ್ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಮತ್ತು ಡಿಎಂಕೆ ನಾಯಕ ಟಿ.ಆರ್.ಬಾಲು ಅವರು ಅದರ ಇಂಗ್ಲಿಷ್ ಅನುವಾದದ ಪ್ರತಿ ಕೋರಿದ್ದರು. ಈ ವೇಳೆ ನಿತೀಶ್​ “ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಎಲ್ಲರೂ ಆ ಭಾಷೆಯನ್ನು ತಿಳಿದಿರಬೇಕು” ಹೇಳಿ ಇಂಗ್ಲಿಷ್ ಪ್ರತಿ ಕೊಟ್ಟಿರಲಿಲ್ಲ. ಬಳಿಕ ಆರ್​ಜೆಡಿ ಸಂಸದ ಮನೋಜ್ ಝಾ ಅನುವಾದ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com