ದೇಶ

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಗೂಡ್ಸ್ ರೈಲು ಡಿಕ್ಕಿ: ಹಳಿತಪ್ಪಿದ 12 ಬೋಗಿಗಳು, ತಪ್ಪಿದ ಅನಾಹುತ

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಗೂಡ್ಸ್ ರೈಲು ಡಿಕ್ಕಿ: ಹಳಿತಪ್ಪಿದ 12 ಬೋಗಿಗಳು, ತಪ್ಪಿದ ಅನಾಹುತ
ಹಳಿ ತಪ್ಪಿದ ಗೂಡ್ಸ್ ರೈಲು
Published On :

ಬಂಕುರ(ಪಶ್ಚಿಮ ಬಂಗಾಳ): ಇಂದು ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಬಂಕುರಾ ಬಳಿ ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ. 

ಬಂಕುರಾ ಬಳಿಯ ಖಾರಾಗ್ ಪುರ್-ಬಂಕುರಾ ಆದ್ರ ರೈಲು ಮಾರ್ಗದ ಓಂಡಾ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಗೂಡ್ಸ್ ರೈಲುಗಳ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸರಕು ರೈಲುಗಳು ಖಾಲಿಯಾಗಿದ್ದವು. ಎರಡು ರೈಲುಗಳ ಮಧ್ಯೆ ಅಪಘಾತ ಹೇಗೆ ಸಂಭವಿಸಿತು ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಅವಘಡದಿಂದ ಆದ್ರಾ ವಿಭಾಗದ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ADRA ವಿಭಾಗವು ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಾದ ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ ಮತ್ತು ಬುರ್ದ್ವಾನ್ ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳಾದ ಧನ್‌ಬಾದ್, ಬೊಕಾರೊ ಮತ್ತು ಸಿಂಗ್‌ಭೂಮ್ ಮತ್ತು ಆಗ್ನೇಯ ರೈಲ್ವೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತವೆ. 

ಕಳೆದ ಜೂನ್ 2ರಂದು ಒಡಿಶಾದಲ್ಲಿ ಕನಿಷ್ಠ 275 ಜೀವಗಳನ್ನು ಬಲಿ ಪಡೆದ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಇತರ ಎರಡು ರೈಲುಗಳ ಭೀಕರ ಅಪಘಾತದ ಘಟನೆ ಇನ್ನೂ ಜನಮಾನಸದಿಂದ ಮಾಸುವ ಮುನ್ನವೇ ಈ ದುರ್ಘಟನೆ ನಡೆದಿದೆ. 

ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಒಂದರ ಹಿಂದೆ ಒಂದರಂತೆ ಅಪಘಾತಕ್ಕೀಡಾದವು. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಅಪಘಾತವು ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಬಹನಾಗಾ ಬಜಾರ್ ನಿಲ್ದಾಣದ ಬಳಿ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿತ್ತು. 

ಚೆನ್ನೈ ಕಡೆಗೆ ಹೋಗುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಪಕ್ಕದ ಹಳಿಯಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಹಳಿತಪ್ಪಿ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಿಂಬದಿಯ ಗಾಡಿ ಮೂರನೇ ಟ್ರ್ಯಾಕ್‌ಗೆ ತಿರುಗಿದಾಗ ಈ ಅಪಘಾತ ಸಂಭವಿಸಿದೆ.

ಮೂರನೇ ಟ್ರ್ಯಾಕ್‌ನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.