ಕಾಂಜಾವಾಲಾ ಅಪಘಾತ ಪ್ರಕರಣ: ಮತ್ತಿಬ್ಬರು ಆರೋಪಿಗಳಿಗೆ ಹುಡುಕಾಟ ಮುಂದುವರೆದಿದೆ- ದೆಹಲಿ ಪೊಲೀಸರು

ದೆಹಲಿಯ ಕಾಂಜಾವಾಲಾ ಮಹಿಳೆ ಸಾವು ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಕೂಡ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು, ಈ ಇಬ್ಬರ ಬಂಧನಕ್ಕಾಗಿ ಹುಡುಕಾಟ ಮುಂದುವರೆದಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.
ದೆಹಲಿ ಪೊಲೀಸ್
ದೆಹಲಿ ಪೊಲೀಸ್

ನವದೆಹಲಿ: ದೆಹಲಿಯ ಕಾಂಜಾವಾಲಾ ಮಹಿಳೆ ಸಾವು ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಕೂಡ ಭಾಗಿಯಾಗಿರುವುದಾಗಿ ತಿಳಿದುಬಂದಿದ್ದು, ಈ ಇಬ್ಬರ ಬಂಧನಕ್ಕಾಗಿ ಹುಡುಕಾಟ ಮುಂದುವರೆದಿದೆ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.

ಕಾರಿನ ಮಾಲೀಕ ಅಶುತೋಷ್ ಮತ್ತು ಆರೋಪಿಗಳಲ್ಲಿ ಒಬ್ಬನ ಸಹೋದರನಾಗಿರುವ ಅಂಕುಶ್ ಎಂಬುವವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಬಂಧಿತ ಐವರನ್ನು ಹೊರತುಪಡಿಸಿ ಇನ್ನೂ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಬಳಿ ಈ ಬಗ್ಗೆ ಸಾಕ್ಷ್ಯಾಧಾರಗಳಿವೆ. ಅಪರಾಧವೊಂದನ್ನು ಎಸಗಿ ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಬಂಧನದಲ್ಲಿರುವ ಆರೋಪಿಗಳನ್ನೂ ರಕ್ಷಿಸಲು ಪ್ರಯತ್ನ ನಡೆಸುತ್ತಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್‌ಪ್ರೀತ್ ಹೂಡಾ ಅವರು ಹೇಳಿದ್ದಾರೆ.

ಮೊದಲು ನಂಬಿದಂತೆ ಕಾರನ್ನು ದೀಪಕ್ ಖನ್ನಾ ಚಾಲನೆ ಮಾಡುತ್ತಿರಲಿಲ್ಲ. ಅಮಿತ್ ಖನ್ನಾ ಕಾರು ಚಾಲನೆ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಅಮಿತ್ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಯಾವುದೇ ಸಂಬಂಧವಿಲ್ಲ. ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಪ್ರಕರಣ ಮುಚ್ಚಿಹಾಕಲು ಯತ್ನಗಳನ್ನು ನಡೆಸುತ್ತಿದ್ದಾರೆ. ಕಾರಿನಡಿ ಅಂಜಲಿ ಸಿಲುಕಿಕೊಂಡಿರುವುದು ಅವರಿಗೆ ತಿಳಿದಿತ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಅಂಜಲಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ತಿಳಿಸಿದ್ದಾರೆ.

ರಾತ್ರಿ 2 ಗಂಟೆಯ ನಂತರ ಅಂಜಲಿ ಸಿಂಗ್ ತನ್ನ ಸ್ನೇಹಿತೆ ನಿಧಿಯೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಒಂದು ಚಕ್ರಕ್ಕೆ ಅಂಜಲಿಯ ಕಾಲು ಸಿಕ್ಕಿಹಾಕಿಕೊಂಡಿದೆ. ನಂತರ ಆಕೆಯನ್ನು ಕಾರಿನಿಂದ ಎಳೆದುಕೊಂಡು ಹೋಗಲಾಗಿದೆ. ಯುವತಿ ಕಿರುಚಾಡಿದ್ದರೂ, ಗೊತ್ತಿದ್ದರೂ ಕಾರನ್ನು ನಿಲ್ಲಿಸಿಲ್ಲ. ಒಂದು ಗಂಟೆಗೂ ಹೆಚ್ಚು ಕಾಲ ಕಾರನ್ನು ಚಲಾಯಿಸಿದ್ದಾರೆ. ಘಟನೆ ನಡೆದು ಸುಮಾರು ಎರಡು ಗಂಟೆಗಳ ನಂತರ ಆರೋಪಿಗಳು ಕಾರನ್ನು ಮಾಲೀಕ ಅಶುತೋಷ್‌ಗೆ ಹಿಂತಿರುಗಿಸಿದ್ದಾರೆ. ಬಳಿಕ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಆಟೋರಿಕ್ಷಾದಲ್ಲಿ ಬೆಳಿಗ್ಗೆ 4.33ಕ್ಕೆ ಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಭೀಕರ ಗಾಯಗಳಿಂದಾಗಿ ಅಂಜಲಿ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಮೃತ ಅಂಜಲಿ ಕುಮಾರಿ ತಲೆಬುರುಡೆ ಸಂಪೂರ್ಣವಾಗಿ ಮುರಿದು ಮಿದುಳು ಹೊರಬಂದಿದ್ದು, ಕನಿಷ್ಠ 40 ಬಾಹ್ಯ ಗಾಯಗಳಿವೆ. ಆಕೆಯ ಪಕ್ಕೆಲುಬುಗಳು ಮುರಿದಿದ್ದು, ಆಕೆಯ ಕಾಲುಗಳು, ಎರಡೂ ಕೈಗಳ ಮೂಳೆ ಮುರಿದಿರುವುದು, ಹಣೆಯ ಮೇಲೆ ಆಳವಾದ ಗಾಯಗಳಾಗಿರುವುದನ್ನು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com