ಭಾರತದಲ್ಲಿ ಕೊರೋನಾ ಉಲ್ಬಣ: ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧರಾಗಿರುವಂತೆ ಆಸ್ಪತ್ರೆಗಳಿಗೆ ಪ್ರಧಾನಿ ಮೋದಿ ಸೂಚನೆ
ದಿನ ಕಳೆದಂತೆ ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಳವಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.
Published: 23rd March 2023 09:38 AM | Last Updated: 23rd March 2023 02:23 PM | A+A A-

ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ.
ನವದೆಹಲಿ: ದಿನಕಳೆದಂತೆ ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಳವಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲಾ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಅಧಿಕಾರಿಗಳಿಗೆ ಕೋವಿಡ್-19 ಇನ್ನೂ ಅಂತ್ಯಗೊಂಡಿಲ್ಲ ಎಂಬುದನ್ನು ಒತ್ತಿ ಹೇಳಿದ ಮೋದಿಯವರು, ರೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಸೂಕ್ತ ನಡವಳಿಕೆಯನ್ನು ಅನುಸರಿಸಲು ಸೂಚನೆ ನೀಡಿದರು.
ಹಿರಿಯ ನಾಗರಿಕರು ಮತ್ತು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರು ಜನನಿಬಿಡ ಪ್ರದೇಶದಲ್ಲಿದ್ದಾಗ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಭಾರತದಲ್ಲಿ ಮತ್ತೆ ಏರಿಕೆಯ ಹಾದಿಯಲ್ಲಿ ಮಹಾಮಾರಿ ಕೊರೋನಾ: ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸಲು ಬಿಬಿಎಂಪಿ ಮುಂದು
ಇದೇ ವೇಳೆ ಆರೋಗ್ಯ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ನ ಸನ್ನದ್ಧತೆ, ಲಸಿಕೆ ಅಭಿಯಾನದ ಸ್ಥಿತಿ, ಹೊಸ ಕೋವಿಡ್ -19 ರೂಪಾಂತರಗಳು ಮತ್ತು ಇನ್ಫ್ಲುಯೆನ್ಸ ಪ್ರಕಾರಗಳ ಹೊರಹೊಮ್ಮುವಿಕೆ ಮತ್ತು ದೇಶದ ಸಾರ್ವಜನಿಕ ಆರೋಗ್ಯದ ಪರಿಣಾಮಗಳನ್ನು ಪರಿಶೀಲಿಸಿದರು.
ಗೊತ್ತುಪಡಿಸಿದ INSACOG ಪ್ರಯೋಗಾಲಯಗಳೊಂದಿಗೆ ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ವರ್ಧಿಸಲು ಪ್ರಧಾನಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾರ್ಚ್ 22 ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 888 ರಷ್ಟಿದೆ ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರವು 0.98% ರಷ್ಟಿದೆಯೊಂದಿಗೆ ಹೊಸ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಭೆಯಲ್ಲಿ ತಿಳಿಸಲಾಯಿತು.
ಇದನ್ನೂ ಓದಿ: ಕೋವಿಡ್ ಚಿಕಿತ್ಸೆಯಲ್ಲಿ ಆ್ಯಂಟಿಬಯಾಟಿಕ್ಸ್ ಬಳಕೆ ಬೇಡ: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ
20 ಮುಖ್ಯ ಕೋವಿಡ್-19 ಔಷಧಗಳು, 12 ಇತರ ಔಷಧಗಳು, ಎಂಟು ಬಫರ್ ಔಷಧಗಳು ಮತ್ತು 1 ಇನ್‌ಫ್ಲುಯೆನ್ಸ ಔಷಧಗಳ ಲಭ್ಯತೆ ಮತ್ತು ಬೆಲೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು.
ಸಭೆಯಲ್ಲಿ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸದಸ್ಯ (ಆರೋಗ್ಯ) ಎನ್‌ಐಟಿಐ ಆಯೋಗ್ ಡಾ ವಿ ಕೆ ಪಾಲ್, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪಿಎಂಒ ಸಲಹೆಗಾರ ಅಮಿತ್ ಖರೆ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.