
ಲಖನೌ: ಉತ್ತರ ಪ್ರದೇಶ ಸರ್ಕಾರ 'ಒಂದು ಟ್ರಿಲಿಯನ್ ಸುಳ್ಳು' ಹೇಳಲು ಮಾತ್ರ ಸಮರ್ಥವಾಗಿದೆ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಗುರಿ ತಲುಪ ಹೇಳಿಕೆ 'ಅವಾಸ್ತವಿಕ' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಟೀಕಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಯಾವುದೇ ಸ್ಪಷ್ಟ ಹೂಡಿಕೆಗಳಿಲ್ಲದೆ ರೈತರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
"ಬಿಜೆಪಿ 1 ಟ್ರಿಲಿಯನ್ ಸುಳ್ಳುಗಳನ್ನು ಹೇಳುವ ದಾಖಲೆಯನ್ನು ಮಾತ್ರ ಮಾಡಬಹುದು, ಬೇರೇನೂ ಮಾಡಲು ಸಾಧ್ಯ ಇಲ್ಲ" ಎಂದು ಮಾಜಿ ಸಿಎಂ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಮುಂದಿನ ನಾಲ್ಕು ವರ್ಷಗಳಲ್ಲಿ ಯುಪಿಯ ಆರ್ಥಿಕತೆಯು USD1 ಟ್ರಿಲಿಯನ್ ತಲುಪುತ್ತದೆ ಎಂಬ ಘೋಷಣೆಯನ್ನು ಯುಪಿ ಬಿಜೆಪಿ ಸರ್ಕಾರ ಮಾಡಿದೆ. ಆದರೆ ಇಂದಿನ ಅಭಿವೃದ್ಧಿಯ 'ಬೆಳವಣಿಗೆ ದರ'ದ ಪ್ರಕಾರ, ಇದು ಅಸಾಧ್ಯ, ಅದಕ್ಕಾಗಿಯೇ ಇದು 'ಮಹಾಜೂತ್' (ದೊಡ್ಡ ಸುಳ್ಳು)" ಎಂದು ಯಾದವ್ ಹೇಳಿದ್ದಾರೆ.
ರಾಜ್ಯದಲ್ಲಿ ನಿರುದ್ಯೋಗ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ರೈತರು, ಕೈಗಾರಿಕೋದ್ಯಮಿಗಳು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹಣದುಬ್ಬರ, ಜನರ ಆದಾಯ, ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಹೆಚ್ಚುತ್ತಿರುವ ಔಷಧ ಮತ್ತು ಶಿಕ್ಷಣದ ವೆಚ್ಚಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಯಾದವ್, "ಎಲ್ಲರೂ ಬಿಜೆಪಿ ಬೇಡ ಎನ್ನುತ್ತಿದ್ದಾರೆ" ಎಂದು ಹೇಳಿದರು.
Advertisement