Operation Sindoor: ಪಾಕಿಸ್ತಾನ, ಪಿಒಕೆಯಲ್ಲಿ ಈ ಒಂಬತ್ತು ಭಯೋತ್ಪಾದಕ ಕೇಂದ್ರಗಳು ಭಾರತ ಸೇನೆಗೆ ಟಾರ್ಗೆಟ್ ಆಗಿದ್ದು ಏಕೆ? ಅವು ಯಾವುವು?

ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿದ್ದು, ಪಡೆಗಳು ಮತ್ತು ಸುಧಾರಿತ ಸ್ವತ್ತುಗಳ ಸಂಘಟಿತ ಸಜ್ಜುಗೊಳಿಸುವಿಕೆಯನ್ನು ಒಳಗೊಂಡಿತ್ತು.
A map marking the nine terror camps targeted by India during Operation Sindoor in Pakistan and Pakistan-occupied Kashmir.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಗುರಿಯಾಗಿಸಿಕೊಂಡ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರುತಿಸುವ ನಕ್ಷೆ.
Updated on

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಇಂದು ನಸುಕಿನ ಜಾವ ತಕ್ಕ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ದ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ಸರಣಿ ವಾಯು ದಾಳಿ ನಡೆಸಿ ಅದಕ್ಕೆ ಆಪರೇಷನ್ ಸಿಂದೂರ್ ಎಂದು ಕರೆದಿದೆ. ಮತ್ತು ಈ ದಾಳಿ ಯಶಸ್ವಿಯಾಗಿ ಕಾರ್ಯಗತಗೊಳಿಸಿರುವುದಾಗಿ ಭಾರತದ ಸಶಸ್ತ್ರ ಪಡೆಗಳು ಘೋಷಿಸಿವೆ.

ಇಂದಿನ ದಾಳಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಗುಂಪುಗಳ ಮೇಲೆ ನಡೆಸಲಾಗಿದೆ ಎಂದು ಭಾರತ ಸೇನೆ ಹೇಳಿಕೊಂಡಿದೆ. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿದ್ದು, ಪಡೆಗಳು ಮತ್ತು ಸುಧಾರಿತ ಸ್ವತ್ತುಗಳ ಸಂಘಟಿತ ಸಜ್ಜುಗೊಳಿಸುವಿಕೆಯನ್ನು ಒಳಗೊಂಡಿತ್ತು.

ಭಾರತೀಯ ಸಶಸ್ತ್ರ ಪಡೆಗಳು ವಿಶೇಷ ನಿಖರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಪಾಕಿಸ್ತಾನದ ನಾಲ್ಕು ನೆಲೆಗಳಾದ ಬಹವಾಲ್ಪುರ್, ಮುರಿಯ್ಕೆ, ಸಿಯಾಲ್ಕೋಟ್ ಮತ್ತು ಸರ್ಜಲ್ - ಮತ್ತು ಪಿಒಕೆಯಲ್ಲಿ ಐದು ನೆಲೆಗಳನ್ನು ಹೊಡೆದವು. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಆಶ್ರಯದಲ್ಲಿ ನಿರ್ಭಯದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಮಾಡುವ ಗುರಿಯನ್ನು ಈ ದಾಳಿಗಳು ಹೊಂದಿದ್ದವು.

ಹಾಗಾದರೆ ಭಾರತೀಯ ಸೇನೆ ಈ 9 ಸ್ಥಳಗಳನ್ನೇ ಏಕೆ ಆಯ್ಕೆ ಮಾಡಿಕೊಂಡಿತು?

ಭಾರತ ವಿರೋಧಿ ಭಯೋತ್ಪಾದಕ ಮೂಲಸೌಕರ್ಯದ ಜಾಲವನ್ನು ಕೆಡವಲು ಸ್ಥಳಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಯಿತು. ಈ ತಾಣಗಳು ಲಷ್ಕರ್-ಎ-ತೈಬಾ (LeT), ಜೈಶ್-ಎ-ಮೊಹಮ್ಮದ್ (JeM), ಮತ್ತು ಹಿಜ್ಬುಲ್ ಮುಜಾಹಿದ್ದೀನ್ (HM) ಸೇರಿದಂತೆ ನಿಷೇಧಿತ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವು - ಇವು ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳಿಂದ ನೇರ ಬೆಂಬಲ ಮತ್ತು ಆಶ್ರಯವನ್ನು ಪಡೆಯುವ ಸಂಘಟನೆಗಳಾಗಿವೆ.

ಈ ಉಗ್ರರ ಗುಂಪುಗಳು ತರಬೇತಿ ಶಿಬಿರಗಳು (ಮರ್ಕಜ್) ಮತ್ತು ಉಡಾವಣಾ ಪ್ಯಾಡ್‌ಗಳಿಂದ ಕಾರ್ಯನಿರ್ವಹಿಸುತ್ತವೆ, ಅವುಗಳಲ್ಲಿ ಹಲವು ಸರ್ಕಾರ ನಡೆಸುವ ಕಟ್ಟಡಗಳು ಮತ್ತು ಸಂಸ್ಥೆಗಳಲ್ಲಿ ಅಡಗಿಕೊಂಡಿವೆ. ಉಡಾವಣಾ ಪ್ಯಾಡ್‌ಗಳನ್ನು ಒಳನುಸುಳುವಿಕೆ ಪ್ರಯತ್ನಗಳು ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನಡೆಸಲು ಬಳಸಿದರೆ, ಪಾಕಿಸ್ತಾನದೊಳಗಿನ ದೊಡ್ಡ ಸೌಲಭ್ಯಗಳನ್ನು ಧಾರ್ಮಿಕ ಬೋಧನೆ, ಪ್ರಚಾರ, ಲಾಜಿಸ್ಟಿಕ್ಸ್ ಮತ್ತು ನೇಮಕಾತಿಗಾಗಿ ಬಳಸಲಾಗುತ್ತದೆ.

9 ಸ್ಥಳಗಳು ಯಾವುವು, ಹೇಗೆ ಕಾರ್ಯನಿರ್ವಹಿಸುತ್ತವೆ?

1. ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್

2015 ರಿಂದ ಕಾರ್ಯನಿರ್ವಹಿಸುತ್ತಿರುವ ಇದು ಜೆಇಎಂನ ಪ್ರಾಥಮಿಕ ತರಬೇತಿ ಮತ್ತು ಬೋಧನೆ ಕೇಂದ್ರವಾಗಿದ್ದು,ವರ್ಚುವಲ್ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು 2019 ರ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಹಿಂದಿನ ದಾಳಿಗಳಿಗೆ ನಿಕಟ ಸಂಬಂಧ ಹೊಂದಿದೆ. ಈ ಸೌಲಭ್ಯವು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು ಇತರ ಹಿರಿಯ ನಾಯಕರನ್ನು ಹೊಂದಿದೆ. ಅಜರ್ ಇಲ್ಲಿಂದ ಹಲವಾರು ಭಾರತ ವಿರೋಧಿ ಭಾಷಣಗಳನ್ನು ಮಾಡಿದ್ದಾನೆ, ಜಿಹಾದ್‌ಗೆ ಕರೆ ನೀಡುವುದು, ಯುವಕರನ್ನು ನೇಮಿಸಿಕೊಳ್ಳುವುದು ಇಲ್ಲಿಂದಲೇ ಮಾಡುತ್ತಿರುತ್ತಾನೆ. ಈ ತಾಣವು ನಿಯಮಿತ ಶಸ್ತ್ರಾಸ್ತ್ರ ಮತ್ತು ಧಾರ್ಮಿಕ ತರಬೇತಿಯನ್ನು ಹೊಂದಿದೆ.

2. ಮರ್ಕಜ್ ತೈಬಾ, ಮುರಿಡ್ಕೆ

2000ನೇ ಇಸವಿಯಲ್ಲಿ ಪಂಜಾಬ್‌ನ ಶೇಖುಪುರದಲ್ಲಿ ಸ್ಥಾಪಿಸಲಾದ ಇದು ಎಲ್‌ಇಟಿಯ ಅತ್ಯಂತ ಮಹತ್ವದ ತರಬೇತಿ ಸೌಲಭ್ಯವಾಗಿದ್ದು, ವಾರ್ಷಿಕವಾಗಿ ಸುಮಾರು ಸಾವಿರ ವ್ಯಕ್ತಿಗಳನ್ನು ನೇಮಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇದು ಶಸ್ತ್ರಾಸ್ತ್ರ ತರಬೇತಿ, ಧಾರ್ಮಿಕ ಬೋಧನೆ ಮತ್ತು ಮೂಲಭೂತವಾದವನ್ನು ನೀಡುತ್ತದೆ. ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಇಲ್ಲಿ ಮಸೀದಿ ಮತ್ತು ಅತಿಥಿ ಗೃಹವನ್ನು ನಿರ್ಮಿಸಲು 10 ಮಿಲಿಯನ್ ಹಣ ನೀಡಿದ್ದನು ಎಂದು ಹೇಳಲಾಗುತ್ತಿದೆ. ಈ ಕೇಂದ್ರವು ಅಜ್ಮಲ್ ಕಸಬ್ ಸೇರಿದಂತೆ 26/11 ಮುಂಬೈ ದಾಳಿಯ ಅಪರಾಧಿಗಳಿಗೆ ಐಎಸ್‌ಐ ಮೇಲ್ವಿಚಾರಣೆಯಲ್ಲಿ ತರಬೇತಿ ನೀಡಿತು.

3. ಸರ್ಜಲ್, ಟೆಹ್ರಾ ಕಲಾನ್

ನರೋವಲ್ ಜಿಲ್ಲೆಯಲ್ಲಿರುವ ಈ ಜೆಇಎಂ ಕೇಂದ್ರವು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಾರ್ಯನಿರ್ವಹಿಸುತ್ತಿದ್ದು ಜಮ್ಮುವಿನ ಸಾಂಬಾದಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಇದು ಗಡಿಯಾಚೆಗಿನ ಸುರಂಗ ಒಳನುಸುಳುವಿಕೆ ಮತ್ತು ಡ್ರೋನ್ ಆಧಾರಿತ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತು ಸಾಗಾಟಕ್ಕೆ ಉಡಾವಣಾ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಜೆಇಎಂ ಕಮಾಂಡರ್‌ಗಳಾದ ಮೊಹಮ್ಮದ್ ಅದ್ನಾನ್ ಅಲಿ ಮತ್ತು ಕಾಶಿಫ್ ಜಾನ್ ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ, ಇದನ್ನು ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ನೋಡಿಕೊಳ್ಳುತ್ತಾನೆ.

4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್

ಭುಟ್ಟಾ ಕೋಟ್ಲಿ ಸರ್ಕಾರಿ ಆವರಣದಲ್ಲಿ ನೆಲೆಗೊಂಡಿರುವ ಈ ಹಿಜ್ಬುಲ್ ಮುಜಾಹಿದ್ದೀನ್ ಶಿಬಿರವು ಉಗ್ರರಿಗೆ ತರಬೇತಿ ನೀಡುತ್ತದೆ, ಜಮ್ಮುವಿಗೆ ಒಳನುಸುಳುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಮೊಹಮ್ಮದ್ ಇರ್ಫಾನ್ ಖಾನ್, ಅಲಿಯಾಸ್ ಇರ್ಫಾನ್ ತಂಡಾ ನೇತೃತ್ವದಲ್ಲಿ, ಈ ಕೇಂದ್ರವು ಯಾವುದೇ ಸಮಯದಲ್ಲಿ ಸುಮಾರು 20–25 ಸಶಸ್ತ್ರ ಉಗ್ರಗಾಮಿಗಳನ್ನು ಇರಿಸುತ್ತದೆ.

5. ಮರ್ಕಜ್ ಅಹ್ಲೆ ಹದೀಸ್ ಬರ್ನಾಲಾ, ಭಿಂಬರ್

ಪಾಕ್ ಆಕ್ರಮಿತ ಕಾಶ್ಮೀರದ ಬರ್ನಾಲಾದ ಹೊರವಲಯದಲ್ಲಿರುವ ಈ ಎಲ್‌ಇಟಿ ಶಿಬಿರವನ್ನು ಉಗ್ರಗಾಮಿಗಳಿಗೆ ಉಡಾವಣೆಗೆ ಮತ್ತು ಪೂಂಚ್, ರಾಜೌರಿ ಮತ್ತು ರಿಯಾಸಿ ವಲಯಗಳಿಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಬಳಸಲಾಗುತ್ತದೆ. ಕಾರ್ಯಾಚರಣೆಯ ಕಮಾಂಡರ್‌ಗಳು ಈ ಸೌಲಭ್ಯಕ್ಕೆ ಆಗಾಗ್ಗೆ ಹೋಗುತ್ತಾರೆ, ಇದು 100–150 ಕಾರ್ಯಕರ್ತರನ್ನು ಹೊಂದಿದೆ, ಈ ಪ್ರದೇಶದಲ್ಲಿ ಎಲ್‌ಇಟಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

A map marking the nine terror camps targeted by India during Operation Sindoor in Pakistan and Pakistan-occupied Kashmir.
Operation Sindoor: ಜೈಶ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಸರ್ವನಾಶ!

6. ಮರ್ಕಜ್ ಅಬ್ಬಾಸ್, ಕೋಟ್ಲಿ

ಜೆಇಎಂ ಕೌನ್ಸಿಲ್‌ನ ಹಿರಿಯ ಸದಸ್ಯ ಮತ್ತು ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಆಪ್ತ ಸಹಾಯಕ ಖಾರಿ ಜರ್ರಾರ್ ನೇತೃತ್ವದ ಪ್ರಮುಖ ಜೆಇಎಂ ಕೇಂದ್ರ. ಜರ್ರಾರ್ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೇಕಾದವನಾಗಿದ್ದಾನೆ. ಈ ತಾಣವು ಪೂಂಚ್ ಮತ್ತು ರಾಜೌರಿ ಮೂಲಕ ಒಳನುಸುಳುವಿಕೆ ಮಾರ್ಗಗಳನ್ನು ಬೆಂಬಲಿಸುತ್ತದೆ, 125 ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತದೆ.

7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ

ಹಿಜ್ಬುಲ್ ಮುಜಾಹಿದ್ದೀನ್ ನ ಅತ್ಯಂತ ಹಳೆಯ ಶಿಬಿರಗಳಲ್ಲಿ ಒಂದಾದ ಈ ಸೌಲಭ್ಯವು ಪರ್ವತ ಯುದ್ಧಕ್ಕೆ ಸೂಕ್ತವಾದ ಶಸ್ತ್ರಾಸ್ತ್ರ ನಿರ್ವಹಣೆ, ಸ್ನಿಪ್ಪಿಂಗ್ ಮತ್ತು ಬದುಕುಳಿಯುವ ತಂತ್ರಗಳಲ್ಲಿ 150–200 ಕಾರ್ಯಕರ್ತರಿಗೆ ತರಬೇತಿ ನೀಡುತ್ತದೆ. ಗಡಿಯಾಚೆಗಿನ ಅತಿಕ್ರಮಣಗಳಿಗೆ ಉಗ್ರರನ್ನು ಸಜ್ಜುಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್

ಬೈತ್-ಉಲ್-ಮುಜಾಹಿದ್ದೀನ್ ಎಂದೂ ಕರೆಯಲ್ಪಡುವ ಈ ಎಲ್‌ಇಟಿ ಶಿಬಿರವು ಮುಜಫರಾಬಾದ್-ನೀಲಂ ರಸ್ತೆಯ ಚೆಲಾಬಂಡಿ ಸೇತುವೆಯ ಬಳಿ ಇದೆ. ಇದು ಅಜ್ಮಲ್ ಕಸಬ್ ಸೇರಿದಂತೆ 26/11 ದಾಳಿಕೋರರಿಗೆ ತರಬೇತಿ ನೀಡಿತು.

2000 ದಶಕದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿರುವ ಈ ಸ್ಥಳವು 250 ತರಬೇತಿದಾರರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಪಾಕಿಸ್ತಾನ ಸೇನಾ ತರಬೇತುದಾರರು ಇಲ್ಲಿ ಶಸ್ತ್ರಾಸ್ತ್ರ ತರಬೇತಿಯಲ್ಲಿ ಸಹಾಯ ಮಾಡುತ್ತಾರೆ ಎಂದು ತಿಳಿದುಬಂದಿದೆ.

9. ಮರ್ಕಜ್ ಸೈಯದ್ನಾ ಬಿಲಾಲ್, ಮುಜಫರಾಬಾದ್

ಈ ಜೆಇಎಂ ಸಾರಿಗೆ ಸೌಲಭ್ಯವು ಮುಜಫರಾಬಾದ್‌ನ ಕೆಂಪು ಕೋಟೆಯ ಎದುರು ಇದೆ. ಸಾಮಾನ್ಯವಾಗಿ 50–100 ಕೇಡರ್‌ಗಳಿಗೆ ವಸತಿ ಕಲ್ಪಿಸಲಾಗುತ್ತದೆ, ಇದನ್ನು ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ನೋಡಿಕೊಳ್ಳುತ್ತಾನೆ. ಪರಾರಿಯಾದ ಉಗ್ರ ಆಶಿಕ್ ನೆಂಗ್ರೂ ಮತ್ತು ಇತರರು ಇಲ್ಲಿಂದ ಕಾರ್ಯನಿರ್ವಹಿಸುತ್ತಾರೆ. ಈ ಸೌಲಭ್ಯವನ್ನು ಪಾಕಿಸ್ತಾನ ಸೇನೆಯ ಗಣ್ಯ ವಿಶೇಷ ಸೇವೆಗಳ ಗುಂಪು (SSG) ಜೆಇಎಂ ಹೋರಾಟಗಾರರಿಗೆ ತರಬೇತಿ ನೀಡಲು ಬಳಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com