

ಬೆಂಗಳೂರು: ಹೆಚ್ಚುವರಿ ಕೆಲಸದ ಅವಧಿಯ ಕುರಿತು ಮೊದಲಿನಿಂದಲೂ ಒತ್ತಾಯ ಹೇರುತ್ತಾ ಬಂದಿದ್ದ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಇದೀಗ ಅಂತಹುದೇ ಮತ್ತೊಂದು ಸೂತ್ರದೊಂದಿಗೆ ಮುಂದೆ ಬಂದಿದ್ದಾರೆ.
ಹೌದು.. ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತೊಮ್ಮೆ ಕೆಲಸದ ಅವಧಿಯ ವಿಚಾರವಾಗಿ ಮಾತನಾಡಿದ್ದು, ಈ ಬಾರಿ ಚೀನಾ ನಿದರ್ಶನದೊಂದಿಗೆ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ವಾದ ಸಮರ್ಥಿಸಿಕೊಂಡಿದ್ದು, ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೂರ್ತಿಗಳು ಚೀನಾದ ನಿದರ್ಶನ ನೀಡಿದ್ದಾರೆ.
ಚೀನಾದಲ್ಲಿ ವಾರಕ್ಕೆ 6 ದಿನ, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಲಾಗುವುದನ್ನು ನಾರಾಯಣಮೂರ್ತಿ ಉದಾಹರಣೆಯಾಗಿ ನೀಡಿದ್ದಾರೆ. ಅಂತೆಯೇ ಸಮರ್ಥ ಕೆಲಸದ ವ್ಯವಸ್ಥೆಯು ದೇಶದ ಅಭಿವೃದ್ದಿಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.
ಪ್ರಯತ್ನದಿಂದ ಮಾತ್ರವೇ ಅಭಿವೃದ್ಧಿ ಬರುವುದು. ಯಾವುದೇ ವ್ಯಕ್ತಿ ಸಮುದಾಯ ಮತ್ತು ದೇಶವಾಗಲೀ ಪರಿಶ್ರಮ ಇಲ್ಲದೇ ಅಭಿವೃದ್ಧಿ ಹೊಂದಿಲ್ಲ. ಹಾಗೆಯೇ, ಮೊದಲು ಜೀವನ ಪಡೆಯಿರಿ, ಬಳಿಕ ಕೆಲಸ ಮತ್ತು ಜೀವನ ಸಮತೋಲನ ಸಾಧಿಸಿರಿ ಎಂದೂ ಯುವಜನರಿಗೆ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
ಚೀನಾದ ಹೊಟೆಲ್ ಉದಾಹರಣೆ
‘ಕಳೆದ ವರ್ಷ ಕಾಟಮರನ್ನ (ನಾರಾಯಣಮೂರ್ತಿ ಅವರ ಹೂಡಿಕೆ ಸಂಸ್ಥೆ) ಕೆಲ ಹಿರಿಯ ಉದ್ಯೋಗಿಗಳು ಚೀನಾಗೆ ಭೇಟಿ ನೀಡಿದ್ದರು. ಅಲ್ಲಿಯ 1, 2, ಮತ್ತು 3ನೇ ಸ್ತರ ನಗರಗಳಿಗೆ ಭೇಟಿ ನೀಡಿದ್ದರು. ಚೀನಾದ ವಾಸ್ತವ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಅವರು ಈ ಮೂರೂ ರೀತಿಯ ನಗರಗಳಲ್ಲಿನ ಹೋಟೆಲ್ಗಳಲ್ಲಿ ಉಳಿದಿದ್ದರು. ಅಲ್ಲಿ 9, 9, 6 ಎನ್ನುವ ಮಾತಿದೆ. ಹಾಗಂದರೆ ಏನು ಗೊತ್ತಾ? ಬೆಳಗ್ಗೆ 9ರಿಂದ ರಾತ್ರಿ 9, ವಾರಕ್ಕೆ 6. ಅಂದರೆ ವಾರಕ್ಕೆ 72 ಗಂಟೆ ಆಯಿತು' ಎಂದು ಎನ್ ಆರ್ ನಾರಾಯಣಮೂರ್ತಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆದರ್ಶ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ನಾರಾಯಣ ಮೂರ್ತಿ 'ಯುವಜನರಿಗೆ ಪ್ರಧಾನಿ ಮೋದಿ ಆದರ್ಶ. ನರೇಂದ್ರ ಮೋದಿ ಅವರು ವಾರಕ್ಕೆ ಬಹುತೇಕ 100 ಗಂಟೆ ಕೆಲಸ ಮಾಡುತ್ತಾರೆ ಎಂದರು. ಅಂತೆಯೇ ಈ ರೀತಿಯ ದೀರ್ಘ ಸಮಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಮಾತ್ರವಲ್ಲ, ಶಿಸ್ತು ಮತ್ತು ದೇಶಾದ್ಯಂತ ಅನೇಕ ಜನರು ಹಂಚಿಕೊಂಡ ಸ್ಪಷ್ಟ ಗುರಿಯ ಬಗ್ಗೆಯೂ ಆಗಿದೆ.
ಈ ರೀತಿಯ ನಿರಂತರ ಹಾಗೂ ವಿಶೇಷ ಪ್ರಯತ್ನವು ವರ್ಷಗಳಲ್ಲಿ ಚೀನಾದ ಆರ್ಥಿಕ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವು ಬುದ್ಧಿವಂತ ಜನರು ಮತ್ತು ಅದ್ಭುತ ಐಡಿಯಾಗಳನ್ನು ಹೊಂದಿದೆ. ಆದರೆ, ಗಂಭೀರ ಕ್ರಮದೊಂದಿಗೆ ಆ ಆಲೋಚನೆಗಳನ್ನು ಬೆಂಬಲಿಸಬೇಕು. ಈ ಆಲೋಚನೆಗಳನ್ನು ಅನುಷ್ಠಾನ ಮಾಡಬೇಕು ಎಂದು ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ, ಇದು ಇಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆ. ಯಾಕೆಂದರೆ ಕಡಿಮೆ ಅವಕಾಶಗಳನ್ನು ಹೊಂದಿರುವವರು ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಕಡಿಮೆ ಸಾಧ್ಯತೆಯಲ್ಲಿ ಉತ್ತಮ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ನನ್ನ ಪ್ರಕಾರ ಕಠಿಣ ಪರಿಶ್ರಮ ಎನ್ನುವುದು ಒಬ್ಬ ವ್ಯಕ್ತಿ, ಸಮುದಾಯ, ಅಥವಾ ದೇಶದ ಯಶಸ್ಸಿಗೆ ಬಹು ಮುಖ್ಯ' ಎಂದರು.
ಮನಸ್ಥಿತಿ ಬದಲಾಗಬೇಕು
ನಮ್ಮಲ್ಲಿ ಉತ್ತಮ ಆಲೋಚನೆಗಳಿದ್ದರೆ, ಪ್ರತಿಯೊಂದು ಅಂಶದಲ್ಲೂ ನಾವು ಅಸಾಧಾರಣ ಬದಲಾವಣೆಗೆ ಪ್ರಯತ್ನಿಸಬಹುದು. ನಾವು ಅದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ ಸಮಾಜದ ಪ್ರತಿಯೊಂದು ಭಾಗದಿಂದ ವಿಭಿನ್ನ ಪ್ರಯತ್ನದ ಅಗತ್ಯತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅವರ ಪ್ರಕಾರ ಕೆಲಸ ಸುಲಭವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಸ್ವಂತ ಉನ್ನತ ಶಿಸ್ತಿನ ಮಾನದಂಡಗಳನ್ನು ಹೊಂದುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ನಮ್ಮಲ್ಲಿ ಉತ್ತಮ ವಿಚಾರಗಳಿದ್ದರೆ, ನಾವು ಮಾಡುವ ಪ್ರತಿಯೊಂದು ಕೆಲಸ, ವಿಚಾರಗಳಲ್ಲಿಯೂ ಅಸಾಧಾರಣ ಶ್ರಮದಿಂದ ಮಾಡಿದರೆ, ಪ್ರತಿಯೊಬ್ಬ ನಾಗರಿಕ, ಅಧಿಕಾರಿ, ರಾಜಕಾರಣಿ, ಜನಪ್ರತಿನಿಧಿ, ಮನಸ್ಸು ಮಾಡಿದರೆ ಚೀನಾವನ್ನು ಹಿಂದಿಕ್ಕಬಹುದು. ಆದರೆ ಆ ಕೆಲಸ ಅಷ್ಟೊಂದು ಸುಲಭವಲ್ಲ ನಾವು ಅರಿತುಕೊಳ್ಳಬೇಕು. ಉನ್ನತ ಮಾನದಂಡಗಳನ್ನು ನಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು. ಆಗಲೇ ಭಾರತ ಚೀನಾವನ್ನು ಹಿಂದಿಕ್ಕುವತ್ತ ಹೆಜ್ಜೆಯಿಡಲು ಸಾಧ್ಯ ಎಂದರು.
ಅಧಿಕಾರ, ಆಡಳಿತ, ಉದ್ಯಮ ಕ್ಷೇತ್ರದಲ್ಲಿ ಭಾರತ ಗೆಲ್ಲಬೇಕಿದೆ
ಭಾರತವು ಮನಸ್ಸು, ಮನಸ್ಥಿತಿಯ ವಿಚಾರದಲ್ಲಿ ಅಧಿಕಾರಶಾಹಿ ಮತ್ತು ಆಡಳಿತ, ಉದ್ಯಮಿಗಳು, ಶಿಕ್ಷಣ ವ್ಯವಸ್ಥೆ ಎನ್ನುವ ಮೂರು ಕ್ಷೇತ್ರಗಳಲ್ಲಿ ಯುದ್ಧ ಗೆಲ್ಲಬೇಕಿದೆ. ಅದರ ವಿರುದ್ಧ ಹೋರಾಡಬೇಕಿದೆ. ಇವೆಲ್ಲವೂ ಆದಾಗಲೇ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿಕೊಂಡು ಮನಸ್ಥಿತಿ, ಮನಸ್ಸನ್ನು ಬದಲಿಸಬಹುದು .ಮೊದಲು ನಾವು ಒಂದೊಳ್ಳೆ ಜೀವನ ಪಡೆಯಬೇಕು. ಆ ಬಳಿಕ ವೃತ್ತಿ ಜೀವನದ ಬಗ್ಗೆ ಯೋಚಿಸಬೇಕು.
ನಾನು ಕಾರ್ಪೋರೆಟ್ ಸಂಸ್ಥೆಗಳ ದಿಗ್ಗಜರು, ಪ್ರಸಿದ್ಧ ಪ್ರಾಧ್ಯಾಪಕರೊಂದಿಗೆ ಮಾತನಾಡಿದ್ದೇನೆ. ಭಾರತ ಮತ್ತು ಅಮೆರಿಕದ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೂ ಭೇಟಿ ನೀಡಿದ್ದೇನೆ. ಅವೆಲ್ಲವೂಗಳಿಂದ ನನಗೆ ಸ್ಪಷ್ಟವಾದ ಒಂದು ವಿಚಾರವೆಂದರೆ ಯಾವುದೇ ವ್ಯಕ್ತಿ ಅಥವಾ ಸಮುದಾಯ, ಇಲ್ಲವೇ ಒಂದು ದೇಶವೇ ಆಗಿರಲಿ ಯಾರೂ ಕೂಡ ಕಠಿಣ ಶ್ರಮವಿಲ್ಲದೆ ಮೇಲೆ ಬಂದಿಲ್ಲ. ಯಶಸ್ಸಿನ ಹಿಂದೆ ಅಪಾರ ಪರಿಶ್ರಮವಿದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
Advertisement