

ಹೈದರಾಬಾದ್: ಹೈದರಾಬಾದ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೊಲೆಯಾದ ಯುವತಿಯನ್ನು ರೆಹಾನಾ ಎಂದು ಗುರುತಿಸಲಾಗಿದ್ದು, ಮೂಲತಃ ಬಿಹಾರದವರಾಗಿದ್ದು, ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಈ ಯುವತಿ, ಬಿಹಾರ ಮೂಲದ 21 ವರ್ಷದ ಅಹ್ಮದ್ ಸಲಾಮ್ ಜೊತೆ ಸುಮಾರು ಒಂದು ವರ್ಷದಿಂದ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರೆಹಾನಾ ಮತ್ತು ಸಲಾಂ ನಡುವೆ ಸಂಬಂಧದ ವಿಚಾರವಾಗಿ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು. ರೆಹಾನಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿದ್ದರೆಂಬ ವಿಚಾರವೂ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದರ ನಡುವೆ ರೆಹಾನಾ ತನ್ನನ್ನು ಮದುವೆಯಾಗುವಂತೆ ಸಲಾಂ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರ ನಡವಿನ ಜಗಳ ವಿಕೋಪಕ್ಕೆ ಹೋಗಿ ಸಲಾಂ ರೆಹಾನಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಬಾಡಿಗೆ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ರೆಹಾನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹತ್ಯೆಯ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಆಕೆಯ ಮೃತದೇಹವನ್ನು ಗೋಣಿ ಚೀಲದೊಳಗೆ ಬಚ್ಚಿಟ್ಟು ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಅಹ್ಮದ್ ಸಲಾಂ ತಲೆಮರೆಸಿಕೊಂಡಿದ್ದಾನೆ. ಫಂಕ್ಷನ್ ಹಾಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಲಾಂನನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತ ಯುವತಿಯ ಕುಟುಂಬಸ್ಥರಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ರೆಹಾನಾ ಮತ್ತು ಆರೋಪಿ ನಡುವಿನ ಸಂಬಂಧದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಹತ್ಯೆಗೆ ನಿಖರವಾಗಿ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.