'ಇದು ರಾಹುಲ್ ಗಾಂಧಿ ಭಾಷಣವೇ ಅಥವಾ ಮೋಹನ್ ಭಾಗವತ್ ಅವರದ್ದೇ?': RSS ಮುಖ್ಯಸ್ಥರನ್ನು ಲೇವಡಿ ಮಾಡಿದ ಕಪಿಲ್ ಸಿಬಲ್

ವಿದೇಶದಲ್ಲಿದ್ದಾಗ 'ಭಾರತವು ಪರಸ್ಪರರ ಬಗ್ಗೆ ಸಂವೇದನೆ ಹೊಂದಿದೆ' ಎಂದು ಹೇಳುವ ಅವರು, ಜನರಿಗಾಗಿ ಸಂವೇದನೆ ಹೊಂದಿರದ ಸರ್ಕಾರವನ್ನೇ ಹೇಗೆ ಬೆಂಬಲಿಸುತ್ತಾರೆ ಎಂದು ಸಿಬಲ್ ಪ್ರಶ್ನಿಸಿದರು.
Kapil Sibal
ಕಪಿಲ್ ಸಿಬಲ್
Updated on

ನವದೆಹಲಿ: ಅಮೆರಿಕದಲ್ಲಿ ನಿಂತು ವೈವಿಧ್ಯತೆ ಕುರಿತಾದ ಹೇಳಿಕೆಗಳಿಗಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಭಾನುವಾರ ಟೀಕಿಸಿದ್ದಾರೆ. ಮಾತನಾಡುತ್ತಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೋ ಅಥವಾ ಸಂಘದ ಮುಖ್ಯಸ್ಥರೋ ಎಂಬ ಗೊಂದಲ ಉಂಟಾಯಿತು. ವಿದೇಶದಲ್ಲಿದ್ದಾಗ ಭಾಗವತ್ ಭಿನ್ನ ನಿಲುವು ತಳೆಯುತ್ತಾರೆ ಎಂದು ಆರೋಪಿಸಿದ್ದಾರೆ.

ಹಿರಿಯ ವಕೀಲರೂ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಸಿಬಲ್, 'ನೀವು ವಿದೇಶದಲ್ಲಿ ವೈವಿಧ್ಯತೆಯನ್ನು ಒಪ್ಪಿಕೊಳ್ಳುತ್ತೀರಿ. ಆದರೆ, ಸ್ವದೇಶದಲ್ಲಿ ವೈವಿಧ್ಯತೆಯನ್ನು ಸಹಿಸುವುದಿಲ್ಲ' ಎಂದು ಭಾಗವತ್ ಅವರನ್ನು ತೀವ್ರವಾಗಿ ಟೀಕಿಸಿದರು.

'ಇದೇ ಹಿಂದುತ್ವದ ವಾಸ್ತವ. ದುರದೃಷ್ಟವಶಾತ್, 2014 ರಿಂದ ಇಲ್ಲಿಯವರೆಗೆ ಈ ದೇಶದಲ್ಲಿ ನಡೆಯುತ್ತಿರುವ ಹೋರಾಟ ಇದೇ ಆಗಿದೆ. ಅಂದರೆ, ಜನರಿಗೆ 'ಬದುಕಿ ಮತ್ತು ಬದುಕಲು ಬಿಡಿ' ಎಂಬ ಮನೋಭಾವದಿಂದ ಬದುಕಲು ನೀವು ಅವಕಾಶ ನೀಡುತ್ತಿಲ್ಲ. ಜಂತರ್ ಮಂತರ್ ವಿಷಯದಲ್ಲಿ ಈ ಸರ್ಕಾರ ಏನು ಮಾಡಿತು? ಆಗ ನೀವು ಧ್ವನಿ ಎತ್ತಿದ್ದೀರಾ? ಇಲ್ಲ, ಈ ಸರ್ಕಾರದ ವಿರುದ್ಧ ನೀವು ಎಂದಿಗೂ ಒಂದು ಮಾತನ್ನೂ ಆಡಲಿಲ್ಲ' ಎಂದು ಸಿಬಲ್ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆರ್‌ಎಸ್‌ಎಸ್ ಮುಖ್ಯಸ್ಥರು, 'ವೈವಿಧ್ಯತೆಯಲ್ಲಿ ಏಕತೆ' ಎಂಬುದು ಭಾರತದ ಡಿಎನ್‌ಎಯಲ್ಲೇ ಇದೆ ಮತ್ತು ಅದನ್ನು ಸಂಭ್ರಮಿಸಬೇಕು, ಗೌರವಿಸಬೇಕು ಹಾಗೂ ಒಪ್ಪಿಕೊಳ್ಳಬೇಕು ಎಂದು ಪ್ರತಿಪಾದಿಸಿದ ನಂತರ ಸಿಬಲ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ 'ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್'ನಲ್ಲಿರುವ ಇನ್ಫೋಸಿಸ್ ಥಿಯೇಟರ್‌ನಲ್ಲಿ ನಡೆದ ಬೃಹತ್ ಸಮಾವೇಶವೊಂದರಲ್ಲಿ 6,000ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ಹಾಗೂ ವಿವಿಧ ಧರ್ಮಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವಂತೆ ಮತ್ತು ಸಮುದಾಯಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.

Kapil Sibal
ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಭಾವಿಸುವ ಹಿಂದೂ ಹಿಂದೂವೇ ಅಲ್ಲ- ಅಮೆರಿಕದಲ್ಲಿ ಮೋಹನ್ ಭಾಗವತ್

'ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್' (AHEAD) ವೇದಿಕೆಯು ಆಯೋಜಿಸಿದ್ದ 'ಯೂನಿವರ್ಸಲ್ ಒನೆಸ್‌ನೆಸ್ ಸೆಲೆಬ್ರೇಷನ್' (ಸಾರ್ವತ್ರಿಕ ಏಕತೆಯ ಸಂಭ್ರಮಾಚರಣೆ) ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಏಕತೆ ಮತ್ತು ವೈವಿಧ್ಯತೆ ಎರಡೂ ಭಾರತದ ಡಿಎನ್‌ಎಯ (DNA) ಭಾಗವಾಗಿವೆ. 'ವೈವಿಧ್ಯತೆಯನ್ನು ಸಂಭ್ರಮಿಸಬೇಕು, ಗೌರವಿಸಬೇಕು ಮತ್ತು ಸ್ವೀಕರಿಸಬೇಕು; ಅದೇ ಸಮಯದಲ್ಲಿ, ನಾವೆಲ್ಲರೂ ಒಂದೆಂಬ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಸುಮಾರು ಒಂದು ಗಂಟೆ ಕಾಲ ನಡೆದ ತಮ್ಮ ಭಾಷಣದಲ್ಲಿ ಹೇಳಿದರು.

'ಇದು ರಾಹುಲ್ ಗಾಂಧಿಯವರ ಭಾಷಣವೋ ಅಥವಾ ಭಾಗವತ್ ಜಿ ಅವರ ಭಾಷಣವೋ ಎಂದು ನಾನು ಯೋಚಿಸುತ್ತಿದ್ದೆ. ಏಕೆಂದರೆ, 'ಭಾರತವು ಪರಸ್ಪರರ ಬಗ್ಗೆ ಹೇಗೆ ಭಾವಿಸುತ್ತದೆ' ಎಂಬುದರ ಕುರಿತು ಅವರು ಮಾತನಾಡಿದಾಗ, ಅವರು ವಾಸ್ತವವಾಗಿ ಏನು ಹೇಳುತ್ತಿದ್ದರು? ರಾಹುಲ್ ಗಾಂಧಿಯವರು ಸದಾ ಹೇಳುವುದೂ ಇದನ್ನೇ' ಎಂದರು.

'ನೀವು ನ್ಯೂಯಾರ್ಕ್‌ನಲ್ಲಿದ್ದಾಗ 'ಭಾರತವು ಪರಸ್ಪರರ ಬಗ್ಗೆ ಸಂವೇದನೆ ಹೊಂದಿದೆ' ಎಂದು ಭಾವಿಸುತ್ತೀರಿ. ಆದರೆ, ದೆಹಲಿಯಲ್ಲಿದ್ದಾಗ ಹಾಗೆ ಅನ್ನಿಸುವುದಿಲ್ಲ. ಗುಂಪು ಹಲ್ಲೆ (ಲಿಂಚಿಂಗ್) ನಡೆದಾಗ, ಅದಕ್ಕೆ ಬಲಿಯಾದವರ ಬಗ್ಗೆ ನಿಮಗೆ ಏನಾದರೂ ಅನ್ನಿಸುತ್ತದೆಯೇ? ಹಲ್ಲೆಗೊಳಗಾದವರ ಪರವಾಗಿ ನೀವು ಎಂದಾದರೂ ಏನಾದರೂ ಹೇಳಿದ್ದೀರಾ? 'ನನ್ನ ದೇಶದಲ್ಲಿ ಇದು ಏಕೆ ನಡೆಯುತ್ತಿದೆ' ಎಂದು ನೀವು ಎಂದಾದರೂ ಟೀಕಿಸಿದ್ದೀರಾ ಅಥವಾ ಪ್ರಶ್ನಿಸಿದ್ದೀರಾ?' ಎಂದು ಸಿಬಲ್ ಅವರು ಭಾಗವತ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿದೇಶದಲ್ಲಿದ್ದಾಗ 'ಭಾರತವು ಪರಸ್ಪರರ ಬಗ್ಗೆ ಸಂವೇದನೆ ಹೊಂದಿದೆ' ಎಂದು ಹೇಳುವ ಅವರು, ಜನರಿಗಾಗಿ ಸಂವೇದನೆ ಹೊಂದಿರದ ಸರ್ಕಾರವನ್ನೇ ಹೇಗೆ ಬೆಂಬಲಿಸುತ್ತಾರೆ ಎಂದು ಸಿಬಲ್ ಪ್ರಶ್ನಿಸಿದರು.

ವಾಸ್ತವವಾಗಿ, ರಾಮ ಮಂದಿರದ ಉದ್ಘಾಟನೆ ಮತ್ತು ರಾಮ ಪ್ರಾಣ ಪ್ರತಿಷ್ಠಾಪನೆ ನಡೆದಾಗ ನೀವು ಏನು ಹೇಳಿದ್ದೀರಿ? ಹೆಮ್ಮೆಪಡುವಂತಹ ಮಾತುಗಳನ್ನು ನೀವು ಏನು ಆಡಿದ್ದೀರಿ? ನಾವೆಲ್ಲರೂ ಹಿಂದೂಗಳಾಗಿರುವುದಕ್ಕೆ ಮತ್ತು ರಾಮನ ಭಕ್ತರಾಗಿರುವುದಕ್ಕೆ ಹೆಮ್ಮೆಪಡುತ್ತೇವೆ. ಆದರೆ, 'ನೋಡಿ, ಈ ಮಂದಿರ ನಿರ್ಮಾಣಕ್ಕೂ ಮುನ್ನ ನಡೆದ ಘಟನೆಗಳು ನಡೆಯಬಾರದಿತ್ತು' ಎಂದು ನೀವು ಎಂದಿಗೂ ಹೇಳಲಿಲ್ಲ ಎಂದು ಸಿಬಲ್ ಹೇಳಿದರು.

'ವೈವಿಧ್ಯತೆಯನ್ನು ಸಂಭ್ರಮಿಸಬೇಕು, ಸ್ವೀಕರಿಸಬೇಕು, ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದು ನೀವು ಹೇಳುತ್ತೀರಿ - ಸಂಭ್ರಮ, ಗೌರವ, ಸ್ವೀಕಾರ ಮತ್ತು ರಕ್ಷಣೆ ಎಂಬ ಈ ನಾಲ್ಕು ಪದಗಳನ್ನು ನೀವು ಬಳಸುತ್ತೀರಿ. ಭಾರತದಲ್ಲಿ ವೈವಿಧ್ಯತೆಯನ್ನು ರಕ್ಷಿಸದಿದ್ದಾಗ ನೀವು ಎಂದಾದರೂ ಧ್ವನಿ ಎತ್ತಿದ್ದೀರಾ? ಎಂದಾದರೂ ಧ್ವನಿ ಎತ್ತಿದ್ದೀರಾ? ಇಲ್ಲ, ಎಂದಿಗೂ ಇಲ್ಲ. ವೈವಿಧ್ಯತೆಗೆ ವಿರುದ್ಧವಾದ ರಾಜಕಾರಣವನ್ನು ಭಾಗವತ್ ಬೆಂಬಲಿಸುತ್ತಿದ್ದಾರೆ. ಆದರೂ, ನ್ಯೂಯಾರ್ಕ್‌ನಲ್ಲಿ ನೀವು ಈ ಮಾತುಗಳನ್ನು ಆಡುತ್ತಿದ್ದೀರಿ ಏಕೆಂದರೆ ಅಲ್ಲಿನ ಶ್ರೋತೃವರ್ಗವೇ ಬೇರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com